ಬೆಂಗಳೂರು: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲೂ ಟ್ರ್ಯಾಕ್ಟರ್ ರ್ಯಾಲಿ ಆರಂಭವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರು,ಮಕ್ಕಳ ಜೊತೆಗೂಡಿ ಅನ್ನದಾತರು ಪ್ರತಿಭಟನೆ ನಡೆಸಿದ್ದಾರೆ.
ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೆಖರ್, ದೇಶದ ಬೆನ್ನೆಲುಬಾದ ಅನ್ನದಾತನಿಗೆ ಮಾರಕವಾದ ಕಾನೂನನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿರುವುದು ಖಂಡನೀಯ. ಪ್ರಧಾನಿ ಮೋದಿ ನೀವು ತೋರ್ಪಡಿಕೆಗೆ ಮಾತ್ರ ದೇಶಪ್ರೇಮಿ. ಒಳಗೆ ದೇಶ ವಿರೋಧಿ. ಚರ್ಚೆ ಮಾಡದೆಯೇ ಕಾನೂನೂ ಜಾರಿಗೆ ತಂದಿರುವುದು ಸೂಕ್ತವಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಯಡಿಯೂರಪ್ಪ ವಿರುದ್ಧವೂ ಗುಡುಗಿದ ಕೋಡಿಹಳ್ಳಿ, ನೀವು ನಿಜವಾಗಿ ರೈತರ ಪರವಾಗಿದ್ದರೆ ಕೃಷಿ ಕಾಯ್ದೆ, ಜಾನುವಾರು ಕಾಯ್ದೆ ಹಿಂಪಡೆಯಿರಿ. ಇಲ್ಲವಾದಲ್ಲಿ ನಕಲಿ ದೇಶಪ್ರೇಮಿಗಳಿದ್ದಂತೆ ಎಂದು ಹೇಳಿದರು.
ಈಗಾಗಲೇ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ರ್ಯಾಲಿ ಮೂಲಕ ಫ್ರೀಡಂ ಪಾರ್ಕ್ ತಲುಪಿರುವ ರೈತರು, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ರೈತರು ಕೂಡ ಟ್ರ್ಯಾಕ್ಟರ್ ಚಲಾಯಿಸಿಕೊಂಡು ರಾಜಧಾನಿಗೆ ಬಂದಿರುವುದು ವಿಶೇಷ.