ರಾಜ್ಯ ಕೊರೊನಾ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಆಡಳಿತರೂಢ ಬಿಜೆಪಿಯ ಇಪ್ಪತ್ತಕ್ಕೂ ಅಧಿಕ ಶಾಸಕರು ಪ್ರತ್ಯೇಕ ಸಭೆ ನಡೆಸಿದ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಈ ಶಾಸಕರುಗಳು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸಬೇಕೆಂದು ಹೈಕಮಾಂಡ್ ಮೊರೆ ಹೋಗಲಿದ್ದಾರೆ ಎನ್ನಲಾಗಿತ್ತು.
ಇದಕ್ಕೆ ಪುಷ್ಟಿ ನೀಡುವಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು, ಇದರ ಮಧ್ಯೆ ನಡೆದಿರುವ ಬೆಳವಣಿಗೆಯೊಂದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಬಂಡಾಯದ ಬಾವುಟ ಹಾರಿಸಿದ್ದಾರೆ ಎನ್ನಲಾಗುತ್ತಿದ್ದ ಉಮೇಶ್ ಕತ್ತಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಧವಳಗಿರಿ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಭಿನ್ನಮತ ಶಮನಕ್ಕೆ ಮುನ್ನುಡಿ ಬರೆಯಲಾಗಿದೆ ಎನ್ನಲಾಗುತ್ತಿದೆ.
ಯಡಿಯೂರಪ್ಪನವರ ಜೊತೆಗಿನ ಭೇಟಿ ಸಂದರ್ಭದಲ್ಲಿ, ಪ್ರತ್ಯೇಕ ಸಭೆ ನಡೆಸಿದ ಶಾಸಕರುಗಳ ಬೇಡಿಕೆಯನ್ನು ಉಮೇಶ್ ಕತ್ತಿ ವಿವರಿಸಿದ್ದು, ಜೊತೆಗೆ ತಮ್ಮ ಸಹೋದರ ರಮೇಶ್ ಕತ್ತಿ ಅವರಿಗೆ ರಾಜ್ಯಸಭಾ ಚುನಾವಣೆ ಟಿಕೆಟ್ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ರಾಜ್ಯಸಭಾ ಚುನಾವಣೆ ಟಿಕೆಟ್ ನೀಡುವ ವಿಚಾರ ತಮ್ಮ ಕೈಯಲ್ಲಿಲ್ಲ ಎಂದು ಹೇಳಿರುವ ಯಡಿಯೂರಪ್ಪನವರು ಶಾಸಕರುಗಳ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆಂದು ಹೇಳಲಾಗಿದೆ. ಅಲ್ಲದೆ ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಿಮ್ಮನ್ನು ಮಂತ್ರಿ ಮಾಡುವುದು ಖಚಿತ ಎಂಬ ಭರವಸೆಯನ್ನು ಉಮೇಶ್ ಕತ್ತಿ ಅವರಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.