ಬೆಂಗಳೂರು: ರಾಜ್ಯದಲ್ಲಿ ಹಿಂದೆ ಆದ ಪ್ರವಾಹ ಪರಿಹಾರವನ್ನೇ ನೀಡಿಲ್ಲ, ಮನೆಗಳನ್ನು ಸ್ಥಳಾಂತರ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೆ ಮಾಡಿಲ್ಲ. ಈಗ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ನೆರೆ ಬಂದಿದೆ. ಆದರೂ ರಾಜ್ಯ ಸರ್ಕಾರ ಇನ್ನೂ ಪರಿಹಾರ ವ್ಯವಸ್ಥೆ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಬಂದಾಗ ಕೇಂದ್ರಕ್ಕೆ ಹೋಗಿ ನಾವು ಹಣ ತರುತ್ತಿದ್ದೆವು. ಆದರೆ ಇವರು ಪ್ರಧಾನಿ ಮೋದಿ ಭೇಟಿಯಾಗಲು ಹೆದರುತ್ತಿದ್ದಾರೆ. ಇದೊಂದು ಮಹಾಪುಕ್ಕಲು ಸರ್ಕಾರ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದಿಂದ ಈಗಾಗಲೇ ಜಿ.ಎಸ್.ಟಿ. ಮೊದಲ ಕಂತು ಬರಬೇಕಿತ್ತು. ಆದರೆ ಒಂದೇ ಒಂದು ರೂ. ಹಣ ಬಂದಿಲ್ಲ. ರಾಜ್ಯವನ್ನು ಮತ್ತಷ್ಟು ದುಸ್ಥಿತಿಗೆ ತಳ್ಳಲಾಗುತ್ತಿದೆ. ಕೇಂದ್ರ, ರಾಜ್ಯಗಳನ್ನು ದಿವಾಳಿ ಅಂಚಿಗೆ ಕಳಿಸುವ ಕೆಲಸ ಮಾಡುತ್ತಿದೆ. ರಾಜ್ಯಕ್ಕೆ ಧಮ್ಮಿದ್ದರೆ ಕೇಂದ್ರದ ನಡೆಯನ್ನು ವಿರೋಧಿಸಲಿ. ಕೇಂದ್ರ ಸಾಲವಾದರೂ ಮಾಡಲಿ, ಏನಾದರು ಮಾಡಲಿ ಆದರೆ ರಾಜ್ಯಕ್ಕೆ ನೀಡಬೇಕಾದ ಹಣ ನೀಡಲಿ ಎಂದು ಆಗ್ರಹಿಸಿದರು.