ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರಿದ್ದು, ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇಂದು ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ರಾಜ್ಯಪಾಲರು ಕರೆದಿರುವ ಸಭೆ ಕುರಿತು ಕಾಂಗ್ರೆಸ್ ಕೆಂಡಕಾರಿದೆ.
ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದು ಏನನ್ನು ಸೂಚಿಸುತ್ತದೆ? ರಾಜ್ಯದಲ್ಲಿ ಚುನಾಯಿತ ಸರ್ಕಾರವಿಲ್ಲವೇ? ಸರ್ಕಾರದ ಅಸಮರ್ಥ್ಯವೇ ಅಥವಾ ಬಿ ಎಸ್ ವೈ ಮುಕ್ತ ಬಿಜೆಪಿ ಅಭಿಯಾನದ ಭಾಗವೇ? ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.
ಕೊರೊನಾ ನೆಗೆಟಿವ್ ಬಂದರೂ ವಿಚಾರಣೆಗೆ ಹಾಜರಾಗದ ರಮೇಶ್ ಜಾರಕಿಹೊಳಿ
ಕೋವಿಡ್ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿರುವ ಸರ್ಕಾರಕ್ಕೆ ವಿಪಕ್ಷಗಳನ್ನು ಎದುರಿಸುವ ಮುಖವಿಲ್ಲವೇ? ಅಥವಾ ಪರಿಸ್ಥಿತಿ ಎದುರಿಸಲಾಗದೆ ಕೈ ಚೆಲ್ಲಿದೆಯೇ? ಇಂತಹ ಮುಖಹೇಡಿ ಸರ್ಕಾರದಿಂದ ಜನರ ಜೀವ ಉಳಿಸುವುದು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದೇ ವೇಳೆ ಆಕ್ಸಿಜನ್ ಬೇಡಿಕೆ ಹೆಚ್ಚಿದೆ, ಪೂರೈಕೆ ಕಡಿಮೆ ಇದೆ, ಇದ್ದಿದ್ದೂ ಕಾಳ ಸಂತೆಯ ಪಾಲಾಗುತ್ತಿದೆ. ಹೀಗಿರುವಾಗ ಸರ್ಕಾರ ಕಾಳ ಸಂತೆಯನ್ನು ನಿಯಂತ್ರಿಸಿ, ಉತ್ಪಾದನೆ ಹೆಚ್ಚಿಸಿ ಹಾಗೂ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವುದನ್ನ ಬಿಟ್ಟು ವಾರ್ ರೂಮ್ ಎನ್ನುವ ಕಣ್ಣೊರೆಸುವ ಕೆಲಸದಿಂದ ನಯಾಪೈಸೆ ಉಪಯೋಗವಾಗುತ್ತಿಲ್ಲ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.