ಕಲಬುರಗಿ: ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಈ ಹಿಂದೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದೆ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ಕೆಆರ್ ನಗರ ಕ್ಷೇತ್ರದಲ್ಲಿನ ಬಿಜೆಪಿ ಜಯಭೇರಿಗೆ ವಿಜಯೇಂದ್ರ ಅವರೇ ಪ್ರಮುಖ ಕಾರಣಕರ್ತರು ಎಂಬ ಮಾತು ಕೇಳಿಬಂದಿತ್ತು.
ಇದೀಗ ಖಾಲಿ ಇರುವ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಈ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಮೂಲಕ ವಿಜಯೇಂದ್ರ ಸಕ್ರಿಯ ರಾಜಕಾರಣಕ್ಕೆ ಇಳಿಯುತ್ತಾರೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ವಿಜಯೇಂದ್ರ ತಾವು ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ರಾಜ್ಯದ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಿದರು ಸಹ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಾಳೆ ‘ಬಂದ್’ ಬದಲಿಗೆ ಪ್ರತಿಭಟನೆ
ಖಾಸಗಿ ಕಾರ್ಯಕ್ರಮದ ನಿಮಿತ್ತ ಬುಧವಾರದಂದು ಕಲಬುರಗಿ ನಗರಕ್ಕೆ ಬಂದಿದ್ದ ಅವರು, ಈಗ ನಡೆಯುತ್ತಿರುವ ಉಪ ಚುನಾವಣೆ ಬಿಜೆಪಿಗೆ ಸವಾಲಾಗಿದ್ದು, ಇದನ್ನು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಮರ್ಥವಾಗಿ ಎದುರಿಸುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮುಖ್ಯವಾಗಿರುವ ಕಾರಣ ತಾವು ಮುಂದಿನ ದಿನಗಳಲ್ಲಿ ಅಲ್ಲಿ ಪ್ರವಾಸ ಕೈಗೊಳ್ಳುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.