ಬೆಂಗಳೂರು: ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಹಲವಾರು ಸಂಶೋಧನೆಗಳು ನಡೆಯುತ್ತಿದ್ದು, 2021ರ ಆರಂಭದಲಿ ರಾಜ್ಯದಲ್ಲೇ ಮೊದಲು ಲಸಿಕೆ ಸಿದ್ಧವಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕ್ಸ್ ಫರ್ಡ್ ವಿವಿಯ ಆಸ್ಟ್ರಾಜನಿಕಾ ಸಂಸ್ಥೆಯ ಎಂಡಿ ಗಗನ್ ದೀಪ್ ಜೊತೆ ಇಂದು ಅಧಿಕಾರಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಕೊರೊನಾ ಲಸಿಕೆ ಬಗ್ಗೆ ಅವರು ಹಲವು ಮಹತ್ವದ ಮಾಹಿತಿ ನೀಡಿದರು ಎಂದರು.
ಈಗಾಗಲೇ ಆಸ್ಟ್ರಾಜನಿಕಾ ದೇಶದ 1600 ಸೋಂಕಿತರ ಮೇಲೆ ಲಸಿಕೆ ಟ್ರಯಲ್ ನ್ನು ನಡೆಸಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದ್ದು, ಇನ್ನೂ ಎರಡು ಹಂತಗಳ ಪ್ರಯೋಗ ನಡೆಯುತ್ತಿದೆ. 2021ರ ಆರಂಭದಲ್ಲಿ ಕರ್ನಾಟಕದಲ್ಲಿಯೇ ಲಸಿಕೆ ಲಭ್ಯವಾಗುವ ವಿಶ್ವಾಸವಿದೆ. ಕಾರಣ ಮೈಸೂರಿನ ಜೆಎಸ್ಎಸ್ ಸಂಸ್ಥೆ ಹಾಗೂ ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಜೊತೆಯೂ ಆಸ್ಟ್ರಾಜನಿಕಾ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ಲಸಿಕೆ ಲಭ್ಯವಾದ ಬಳಿಕ ಹೇಗೆ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಸರ್ಕಾರ ಕೂಡ ಸಿದ್ಧತೆ ನಡೆಸಿದೆ ಎಂದು ತಿಳಿಸಿದರು.
ಇನ್ನು ಮುಂದಿನ ಮೂರು ತಿಂಗಳು ಚಳಿಗಾಲವಿರುವುದರಿಂದ ಕೊರೊನಾ ಸೋಂಕಿನ ಬಗ್ಗೆ ರಾಜ್ಯದ ಜನರು ಜಾಗೃತವಾಗಿರಬೇಕು. ಎಲ್ಲರೂ ಮುಂಜಾಗೃತಾ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.