ಬೆಂಗಳೂರು: ಕೊರೊನಾ ಕಾರಣದಿಂದಾಗಿ ಶಾಲೆಗಳ ಪುನರಾರಂಭ ವಿಳಂಬವಾಗಿದೆ. ಶಾಲೆಗಳಿಲ್ಲದೇ, ಪಾಠಗಳಿಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆ, ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಎಲ್ಲಾ ನಿಟ್ಟಿನಲ್ಲಿ ಶಾಲೆಗಳ ಆರಂಭದ ಬಗ್ಗೆ ಇಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಶಾಲೆಗಳ ಆರಂಭದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದ್ದು, ಸಭೆಗೂ ಮುನ್ನ ಮಾತನಾಡಿದ ಶಿಕ್ಷಣ ಸಚಿವರು, ಜೂನ್ ತಿಂಗಳಿನಲ್ಲಿಯೇ ಶಾಲೆಗಳನ್ನು ತೆರೆಯಬೇಕಿತ್ತು. ಆದರೆ 6 ತಿಂಗಳಿಂದ ಶಾಲೆ ಆರಂಭವಾಗಿಲ್ಲ. ಆನ್ ಲೈನ್ ತರಗತಿಗಳನ್ನು ಆರಂಭಿಸಿದ್ದೇವೆ. ಆದರೆ ಅದು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೆ ಸೂಕ್ತ ಸೌಲಭ್ಯ ಸಿಗದೇ ತೊಂದರೆಯಾಗುತ್ತಿದೆ. ಶಾಲೆಗಳಿಲ್ಲದೇ, ಪಠ್ಯ-ಪುಸ್ತಕವಿಲ್ಲದೇ ಗ್ರಾಮೀಣ ವಿದ್ಯಾರ್ಥಿಗಳು ಬಾಲ ಕಾರ್ಮಿಕರಾಗುತ್ತಿದ್ದಾರೆ. ಚಿಕ್ಕ ಮಕ್ಕಳ ವಿವಾಹ ಕೂಡ ಹೆಚ್ಚುತ್ತಿದೆ ಎಂಬ ವರದಿ ಬರುತ್ತಿದೆ ಎಂದರು.
ಈಗಾಗಲೇ ಶಾಲೆ ಆರಂಭದ ಬಗ್ಗೆ ಹಲವು ಸುತ್ತಿನ ಸಭೆ ನಡೆಸಿ, ಪೋಷಕರ ಜೊತೆ, ಎಸ್ ಡಿಎಂ ಅಧಿಕಾರಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿ, ಶಾಸಕರು, ಸಚಿವರು ಹೇಗೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ. ಈ ವರದಿಯನ್ನು ಇಂದು ಸಿಎಂ ಯಡಿಯೂರಪ್ಪನವರಿಗೆ ನೀಡಲಾಗುತ್ತಿದೆ. ಸಿಎಂ ನೇತೃತ್ವದಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮಿಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಯಲಿದ್ದು, ಚರ್ಚೆ ಬಳಿಕ ಶಾಲೆ ಆರಂಭದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.