ಬೆಂಗಳೂರು: ಕೊರೊನಾ ಮಹಾಮಾರಿಗೆ ರಾಮಬಾಣ ಎಂದೇ ಪರಿಗಣಿಸಲ್ಪಟ್ಟಿರುವ ಕೋವಿಶೀಲ್ಡ್ ಲಸಿಕೆ ವಿಶೇಷ ವಿಮಾನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ತಲುಪಿದೆ.
ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ವಿಶೇಷ ಸ್ಪೈಸ್ ಜೆಟ್ ವಿಮಾನದ ಮೂಲಕ ಪುಣೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ್ದು, ಅಲ್ಲಿಂದ ವ್ಯಾಕ್ಸಿನ್ ಸೆಂಟರ್ ಗೆ ಲಸಿಕೆಯನ್ನು ಕೊಂಡೊಯ್ಯಲಾಗುತ್ತಿದೆ.
ಒಟ್ಟು 54 ಬಾಕ್ಸ್ ಗಳಲ್ಲಿ 7,94,500 ಡೋಸ್ ಕೋವಿಶೀಲ್ಡ್ ಲಸಿಕೆ ಬಂದು ತಲುಪಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ವ್ಯಾಕ್ಸಿನ್ ಸೆಂಟರ್ ಗೆ ರವಾನಿಸಲಿದ್ದಾರೆ. ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ.