ಬೆಂಗಳೂರು: ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆಗಳು ಬೆಂಗಳೂರಿನಲ್ಲಿ ಕಾವೇರಿದ್ದು, ರಾಜಧಾನಿಯ ವಿವಿಧ ಭಾಗಗಳಲ್ಲಿ ರಸ್ತೆಗಿಳಿದ ವಿವಿಧ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಬೆಂಗಳೂರಿನ ಟೌನ್ ಹಾಲ್, ಕೆ ಆರ್ ಪುರಂ, ಸುಮನಹಳ್ಳಿ, ಫ್ರೀಡಂ ಪಾರ್ಕ್, ಮೆಜೆಸ್ಟಿಕ್, ಮೌರ್ಯ ವೃತ್ತ ಸೇರಿದಂತೆ ಹಲವೆಡೆಗಳಲ್ಲಿ ರೈತರ ಪ್ರತಿಭಟನೆ ಭುಗಿಲೆದ್ದಿದೆ. ಕೆ ಆರ್ ಪುರಂ ನಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಾವಿರಾರು ರೈತರು ರಸ್ತೆ ತಡೆ ನಡೆಸಿ, ರಸ್ತೆಗಳಲ್ಲೇ ಕುಳಿತು ಧರಣಿ ನಡೆಸಿದ್ದಾರೆ. ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಹಾಗೂ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದಂತೆಯೇ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಸುಮನಹಳ್ಳಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿಗೆ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಸಾಥ್ ನೀಡಿವೆ. ಸುಮನಹಳ್ಳಿಯಿಂದ ಟೌನ್ ಹಾಲ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಟೌನ್ ಹಾಲ್, ಮೈಸೂರು ಬ್ಯಾಂಕ್ ವೃತ್ತಗಳಲ್ಲಿ ಪ್ರತಿಭಟನಾಕಾರರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ತಂಡೋಪ ತಂಡವಾಗಿ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಟೌನ್ ಹಾಲ್ ಮುಂಭಾಗ ರಸ್ತೆತಡೆ ನಡೆಸಿ, ಉರುಳು ಸೇವೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೊಂದೆಡೆ ರೈತರು ತಮ್ಮಟೆ ಬಾರಿಸಿ, ನೇಗಿಲು ಹಿಡಿದು ಕುಣಿದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನೊಂದೆಡೆ ಅತ್ತಿಬೆಲೆಯಲ್ಲಿ ಜಯಕರ್ನಾಟಕ ಕಾರ್ಯಕರ್ತರು ಅರೆಬೆತ್ತಲೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಗರದ ಹಲವೆಡೆ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.