ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಕಟ್ಟೆಚ್ಚರ ವಹಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.
ನಿನ್ನೆ ಸುರಿದ ಭಾರೀ ಮಳೆಗೆ ರಾಜಧಾನಿ ಬಹುತೇಕ ಮುಳುಗಡೆಯಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆಗೆ ರಾಜಕಾಲುವೆ ನೀರು ರಸ್ತೆ, ಮನೆಗಳಿಗೆ ನುಗ್ಗಿದ್ದು, ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ರಾಜಧಾನಿಯ ಬಹುತೇಕ ಮನೆಗಳು ಜಲಾವೃತಗೊಂಡಿದ್ದು, ಆಹಾರ ಸಾಮಗ್ರಿಗಳು ನೀರು ಪಾಲಾಗಿವೆ. ಜನರು ಅನ್ನ, ನೀರಿಗಾಗಿ ಪರದಾಡುತ್ತಿದ್ದಾರೆ.
ಈ ನಡುವೆ ಬಿಬಿಎಂಪಿ ಆಯುಕ್ತರಿಗೆ ಕರೆ ಮಾಡಿರುವ ಸಿಎಂ ಯಡಿಯೂರಪ್ಪ, ಮಳೆಯಿಂದಾಗಿ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ನೀರು ನುಗ್ಗಿ ಸಂಕಷ್ಟಕ್ಕೀಡಾಗಿರುವ ಪ್ರದೇಶಗಳಲ್ಲಿ ಅವಲೋಕನ ನಡೆಸಿ, ಜನರ ಸಂಕಷ್ಟ ಆಲಿಸುವಂತೆ ಸೂಚಿಸಿದ್ದಾರೆ.