ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಬಂಧನದ ವೇಳೆ ಸಿಸಿಬಿ ಪೊಲೀಸರು ಕಾನೂನು ಪ್ರಕ್ರಿಯೆ ಪಾಲನೆ ಮಾಡಿಲ್ಲ. ಯಾರೋ ಮಾಡಿದ ಆರೋಪಕ್ಕೆ ನಟಿ ವಿರುದ್ಧ ಕೇಸ್ ದಾಖಲಿಸಿದ್ದು, ಇದು ಪೊಲೀಸರೇ ನಡೆಸಿರುವ ಒಳಸಂಚು ಎಂದು ರಾಗಿಣಿ ಪರ ವಕೀಲರು ವಾದ ಮಂಡಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರ ಜಾಮೀನು ಅರ್ಜಿ ವಿಚಾರಣೆ ಎನ್.ಡಿ.ಪಿ.ಎಸ್. ವಿಶೇಷ ನ್ಯಾಯಾಲಯದಲ್ಲಿ ಆರಂಭವಾಗಿದ್ದು, ನಟಿ ರಾಗಿಣಿ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ. ಎಫ್ಐಆರ್ ಗೂ ಮೊದಲೇ ನಟಿಯ ತನಿಖೆ ನಡೆಸಲಾಗಿದೆ. ರಾಗಿಣಿ ಬಂಧನದ ವೇಳೆ ಕಾನೂನು ಪ್ರಕ್ರಿಯೆಯನ್ನೂ ಪಾಲಿಸಿಲ್ಲ ಎಂದಿದ್ದಾರೆ.
ಸಿಸಿಬಿ ದಾಳಿ ವೇಳೆ ರಾಗಿಣಿ ಮನೆಯಲ್ಲಿ ಕೇವಲ ಸಿಗರೇಟ್ ಸ್ಟ್ರಿಪ್ ಮಾತ್ರ ಸಿಕ್ಕಿದೆ ಹೊರತು ಯಾವುದೇ ಡ್ರಗ್ಸ್ ಸಂಬಂಧಿತ ವಸ್ತುಗಳು ಸಿಕ್ಕಿಲ್ಲ. ಅಲ್ಲದೇ ರಾಗಿಣಿ ನಾಲ್ಕು ಆರೋಪಿಗಳ ಜತೆ ಮಾತ್ರೆ ಸೇವಿಸಿದ್ದಾಗಿ ಮತ್ತೊಬ್ಬ ಆರೋಪಿ ಹೇಳಿಕೆ ನೀಡಿದ್ದನ್ನು ಆಧರಿಸಿ ಪ್ರಕರಣ ದಾಖಲಿಸುವುದು ಎಷ್ಟು ಸರಿ? ಪೊಲೀಸರು ಕಾನೂನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಗಿಣಿ ದ್ವಿವೇದಿ ಆರ್ಮಿ ಅಧಿಕಾರಿ ಕುಟುಂಬದಿಂದ ಬಂದವರು. ಹಲವಾರು ಸಮಾಜಸೇವೆ ಮಾಡಿದ್ದಾರೆ. ಸಿಸಿಬಿ ನಡೆಸುವ ಸಮಾಜಮುಖಿ ಕಾರ್ಯಗಳಲ್ಲೂ ಭಾಗಿಯಾಗಿದ್ದಾರೆ. ಒಂದು ವೇಳೆ ರಾಗಿಣಿ ಎಕಸ್ಟಸಿ ಮಾತ್ರೆ ಸೇವಿಸಿದ್ದರೆ ಅದು ಸಿಸಿಬಿ ಪ್ರಕಾರ ಸಣ್ಣ ಪ್ರಮಾಣದ ಡ್ರಗ್. ಹಾಗಾಗಿ ರಾಗಿಣಿ ಅವರಿಗೆ ಜಾಮೀನು ನೀಡಲು ಇದು ಅರ್ಹವಾದ ಕೇಸ್ ಎಂದು ಮನವಿ ಮಾಡಿದ್ದಾರೆ.