ಬೀದರ್: ಬೀದರ್ ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಘಟನೆ ಬೆಳಕಿಗೆ ಬಂದಿದೆ. ಬಸ್ ಚಾಲಕನ ಸಮಯ ಪ್ರಜ್ನೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೋಡ್ ಬ್ರೇಕರ್ ಬಳಿ ಬಸ್ ಜಂಪಾದ ಪರಿಣಾಮ ಚಲಿಸುತ್ತಿದ್ದ ಬಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬಸ್ ಚಾಲಕ ಬಸ್ ನ್ನು ನಿಲ್ಲಿಸಿ, ಬಸ್ ನಲ್ಲಿದ್ದ 17 ಪ್ರಯಾಣಿಕರನ್ನು ಕೆಳಗಿಳಿಯುವಂತೆ ತಿಳಿಸಿದ್ದಾನೆ. ಪ್ರಯಾಣಿಕರು ಸುರಕ್ಷಿತವಾಗಿ ಬಸ್ ನಿಂದ ಇಳಿದ ಕೆಲವೇ ಹೊತ್ತಲ್ಲಿ ಇಡೀ ಬಸ್ ನೋಡ ನೋಡುತ್ತಿದಂತೆಯೇ ಹೊತ್ತಿ ಉರಿದಿದೆ.
ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. 17 ಜನ ಪ್ರಯಾಣಿಕರು ಹಾಗೂ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಯಾವುದೇ ಪ್ರಾಣಾಪಾಯಗಳು ಆಗಿಲ್ಲ.