ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ, ವಕೀಲ ಜಗದೀಶ್ ಮೂಲಕ ಬೆಂಗಳೂರು ಪೊಲೀಸ್ ಕಮೀಷ್ನರ್ ಕಮಲ್ ಪಂತ್ ಅವರಿಗೆ ದೂರು ಸಲ್ಲಿಸಿದ್ದಾಳೆ.
ಸ್ವತಃ ಯುವತಿಯೇ ಹಸ್ತಾಕ್ಷರದಲ್ಲಿ ಬರೆದಿರುವ ದೂರು ಇದಾಗಿದ್ದು, ದೂರಿನಲ್ಲಿ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಯುವತಿ ನೀಡಿದ ದೂರಿನ ಪ್ರತಿ ಮಾಧ್ಯಮಕ್ಕೆ ಲಭ್ಯವಾಗಿದ್ದು, ರಮೇಶ್ ಜಾರಕಿಹೊಳಿ, ತನಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಹೊಂದಿ, ಬಳಿಕ ಕೆಲಸ ಕೊಡಿಸದೇ ವಂಚಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದ್ದಾಳೆ.
ರೇಪ್ ಕೇಸ್ ದಾಖಲಿಸಿದರೂ ಹೋರಾಡಲು ಸಿದ್ಧನಿದ್ದೇನೆ – ರಮೇಶ್ ಜಾರಕಿಹೊಳಿ
ತಾನು ಉದ್ಯೋಗವರಸಿ ಬೆಂಗಳೂರಿಗೆ ಬಂದು ನೆಲೆಸಿದ್ದೆ. ಶಾರ್ಟ್ ಫಿಲ್ಮ್ ಕುರಿತಾಗಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಕರೆ ಮಾಡಿ ತಿಳಿಸುವುದಾಗಿ ನನ್ನ ಮೊಬೈಲ್ ನಂಬರ್ ಪಡೆದಿದ್ದರು. ಬಳಿಕ ಕರೆ ಮಾಡಿ ನನ್ನ ಬಗ್ಗೆ ನನ್ನ ಕುಟುಂಬದ ಬಗ್ಗೆ ವಿಚಾರಿಸುತ್ತಾ ಸಲುಗೆಯಿಂದ ಮಾತನಾಡಿದ್ದರು.
ಅಲ್ಲದೇ ಕೆಲಸದ ವಿಚಾರವಾಗಿ ಮಾತನಾಡಲು ಮನೆಗೆ ಬರುವಂತೆ ಹೇಳಿದ್ದರು. ಅದರಂತೆ ಅವರು ಹೇಳಿದ ಅಪಾರ್ಟ್ ಮೆಂಟ್ ಗೆ ಹೋಗಿದ್ದೆ. ಅಶ್ಲೀಲವಾಗಿ ಮಾತನಾಡಲು ಆರಂಭಿಸಿದರು. ಪ್ರಭಾವ ಬೀರಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಆದರೆ ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಕೇಳಿದ್ದರು. ನನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ಹೇಳಿದಾಗ ಎಲ್ಲಾ ರೀತಿಯ ಸಹಕಾರ ನೀಡಿ ಖುಷಿ ನೀಡಿದರೆ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅವರ ಅಪಾರ್ಟ್ ಮೆಂಟ್ ನಲ್ಲೇ 2 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಆಗಾಗ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಕೂಡ ಮಾತನಾಡುತ್ತಿದ್ದರು. ಅವರ ಮಾತು ನಂಬಿ ಅವರು ಹೇಳಿದಂತೆ ನಡೆದುಕೊಂಡೆ ಎಂದು ಯುವತಿ ವಿವರಿಸಿದ್ದಾಳೆ.
ಆದರೆ ತನಗೆ ಕೆಲಸ ಕೊಡದೇ ಇದ್ದಾಗ ಅನುಮಾನಗೊಂಡು ಪ್ರಶ್ನಿಸಿದಾಗ ಕೆಲಸದ ವಿಚಾರ ಆಮೇಲೆ ನೋಡೋಣ ಎಂದು ಅವಾಯ್ಡ್ ಮಾಡಲು ಆರಂಭಿಸಿದರು. ನಾನು ಈ ಬಗ್ಗೆ ದೂರು ನೀಡುವುದಾಗಿ ಹೇಳಿದ್ದಕ್ಕೆ ರಮೇಶ್ ಜಾರಕಿಹೊಳಿಯವರೇ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.