ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೇಲೆ ಕಾನೂನಿನ ತೂಗುಗತ್ತಿ ತೂಗುತ್ತಿದ್ದು, ಸಿಡಿ ಪ್ರಕರಣದ ಸಂತ್ರಸ್ತ ಯುವತಿ ವಿಚಾರಣೆಗೆ ಹಾಜರಾಗುತ್ತಿದ್ದಂತೆಯೇ ಬಂಧನ ಭೀತಿಯಲ್ಲಿರುವ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಸಂತ್ರಸ್ತ ಯುವತಿ ನಿನ್ನೆ ನ್ಯಾಯಾಲಯದ ಎದುರು ಹಾಜರಾಗಿ ಹೇಳಿಕೆ ದಾಖಲಿಸುತ್ತಿದ್ದಂತೆ ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಜಾರಕಿಹೊಳಿ, ಬಳಿಕ ಗೋಕಾಕ್ ಗೆ ತೆರಳುತ್ತಾರೆ ಎನ್ನಲಾಗಿತ್ತು. ಆದರೆ ರಮೇಶ್ ಜಾರಕಿಹೊಳಿ ಗೋಕಾಕ್ ಗೆ ತೆರಳದೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎನ್ನಲಾಗಿದೆ.
ಇಂದು ಸಂತ್ರಸ್ತ ಯುವತಿಯನ್ನು ಎಸ್ಐಟಿ ಅಧಿಕಾರಿಗಳು ಮೆಡಿಕಲ್ ಟೆಸ್ಟ್ ಗೆ ಒಳಪಡಿಸಿದ್ದು, ಅದಾದ ಬಳಿಕ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ಯುವತಿ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ವಾಟ್ಸಪ್ ಸಂಭಾಷಣೆ ಕುರಿತು 300 ಪುಟಗಳ ದಾಖಲೆ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಯುವತಿ, ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ ದಾಖಲೆಗಳನ್ನು ಒದಗಿಸಿದಲ್ಲಿ ಜಾರಕಿಹೊಳಿ ಬಂಧನವಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಆತಂಕಕ್ಕೀಡಾಗಿರುವ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದತ್ತ ತೆರಳಿದ್ದಾರೆ ಎನ್ನಲಾಗಿದೆ. ಬಂಧನ ಭೀತಿ ಹಿನ್ನೆಲೆಯಲ್ಲಿ ಜಾರಕಿಹೊಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ.