ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳು ನೀಡಿರುವ ಹೇಳಿಕೆಯಿಂದಲೇ ಮಾಜಿ ಸಚಿವ ವಿನಯ್ ಕುಲಕರ್ಣಿಯವರಿಗೆೆ ಸಂಕಷ್ಟ ಎಂದು ತಿಳಿದುಬಂದಿದೆ.
ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರದ ಬಗ್ಗೆ ಬಂಧಿತ ಆರೋಪಿಗಳು ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆನ್ನಲಾಗಿದೆ. ತಮ್ಮ ಶಿಷ್ಯಂದಿರಿಗಾಗಿ ವಿನಯ್ ಕುಲಕರ್ಣಿ ಬೆಂಗಳೂರಿನ ಮೌರ್ಯ ಹೋಟೇಲ್ ನಲ್ಲಿ 2016ರ ಜೂ.8ರಿಂದ ಜೂ.20ರವರೆಗೆ ರೂಮ್ ಬುಕ್ ಮಾಡಿದ್ದರು ಎನ್ನಲಾಗಿದೆ.
ಯೋಗೀಶ್ ಗೌಡ ಹತ್ಯೆ ಬಳಿಕ ಬಸವರಾಜ್ ಮುತ್ತಗಿ ಹಾಗೂ ಗ್ಯಾಂಗ್ ನ್ನು ಸದಾಶಿವ ನಗರದಲ್ಲಿ ವಿನಯ್ ಕುಲಕರ್ಣಿ ಭೇಟಿಯಾಗಿದ್ದು, ಭೇಟಿ ಬಳಿಕ ಆರೋಪಿಗಳು ಪೊಲೀಸರಿಗೆ ಶರಣಾಗಲು ವ್ಯವಸ್ಥೆ ಮಾಡಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಕೊಲೆ ಪ್ರಕರಣದಿಂದ ಪಾರಾಗಲು ಮೆಗಾ ಪ್ಲಾನ್ ಮಾಡಿದ್ದ ವಿನಯ್ ಕುಲಕರ್ಣಿ, ಯೋಗೀಶ್ ಗೌಡ ಕೊಲೆಗೂ ಮೊದಲ ದಿನ ಹಾಗೂ ಕೊಲೆ ನಡೆದ ದಿನ ತಾವು ದೆಹಲಿಯಲ್ಲಿ ಇದ್ದುದ್ದಾಗಿ ಬಿಂಬಿಸುವಂತೆ ಸಾಕ್ಷ್ಯವನ್ನು ಸಿದ್ಧ ಮಾಡಿದ್ದರು ಎನ್ನಲಾಗಿದೆ.
ಯೋಗೀಶ್ ಗೌಡ ಹತ್ಯೆಗೂ ಮೊದಲೇ ದೆಹಲಿಯಿಂದ ವಾಪಸ್ ಆಗಿದ್ದರೂ ಕೂಡ 2016ರ ಜೂ.16ರಂದು ದೆಹಲಿಗೆ ಹೋಗಿ ಜೂ.18ರಂದು ವಾಪಸ್ ಆಗಿರುವ ಬಗ್ಗೆ ಸಾಕ್ಷ್ಯ ಸಿದ್ಧಪಡಿಸಿದ್ದರು ಎನ್ನಲಾಗಿದೆ. ಆರೋಪಿಗಳ ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.