ಹಿಂದೆ ಯುವ ನಟರೊಬ್ಬರು ಸಾವನ್ನಪ್ಪಿದಾಗ ಎಲ್ಲರಿಗೂ ನೋವಾಗಿತ್ತು. ಆದರೆ ಒಂದೇ ಒಂದು ತನಿಖೆಯಾಗಲೀ, ಮರಣೋತ್ತರ ಪರೀಕ್ಷೆಯಾಗಲಿ ಮಾಡಿಲ್ಲ ಯಾಕೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ನಂಟಿನ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಯುವ ನಟ ಸಾವನ್ನಪ್ಪಿದಾಗ ಮರಣೋತ್ತರ ಪರೀಕ್ಷೆ ನಡೆಸದಂತೆ ಒತ್ತಡ ಹಾಕಲಾಗಿತ್ತು ಎಂಬ ಬಗ್ಗೆ ಸುಳಿವು ನೀಡಿದ್ದಾರೆ. ಅಲ್ಲದೇ ಯುವ ನಟ ಸಾವನ್ನಪ್ಪಿದ ಬಗ್ಗೆ ಒಂದು ತನಿಖೆಯಾಗಿಲ್ಲ, ಪೋಸ್ಟ್ ಮಾರ್ಟಮ್ ಕೂಡಾ ಆಗಿಲ್ಲ ಆ ಬಗ್ಗೆ ನಾನು ಹಿಂದೆಯೂ ಪ್ರಶ್ನಿಸಿದ್ದೆ. ಈಗಲೂ ಪ್ರಶ್ನಿಸುತ್ತಿದ್ದೇನೆ. ಪೊಲೀಸರ ಮೇಲೆ, ವೈದ್ಯರ ಮೇಲೆ ರಾಜಕೀಯ ಒತ್ತಡವಿತ್ತೇ ಎಂಬುದು ತಿಳಿಯಬೇಕಿದೆ. ನನಗೆ ನಟನ ಕುಟುಂಬವನ್ನು ನೋಯಿಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ 25-30 ಕಲಾವಿದರು ಭಾಗಿಯಾಗಿದ್ದಾರೆ. ಇವರಲ್ಲಿ 18 ಜನ ಏಜೆಂಟರೇ ಇದ್ದಾರೆ. ಪೊಲೀಸರಿಗೆ ಎಲ್ಲ ವಿಚಾರಗಳ ಬಗ್ಗೆ ಮಾಹಿತಿಯಿದೆ. ಆದರೆ ಕೆಲ ಒತ್ತಡಗಳು ಪೊಲೀಸರ ಕೈ ಕಟ್ಟಿಹಾಕಿದೆ. ಕನ್ನಡ ಚಿತ್ರರಂಗದಲ್ಲಿ ಯಾರ್ಯಾರು ಡ್ರಗ್ಸ್ ಜಾಲದಲ್ಲಿದ್ದಾರೆ. ಇದರಿಂದ ಯಾರ್ಯಾರಿಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದೆ. ಹಲವು ವಿಚಾರಗಳ ಬಗ್ಗೆ ತನಿಖೆಯಾಗಬೇಕು. ಎಲ್ಲವೂ ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.