ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದಾಗಿ ಗ್ರಾಮಗಳು ಜಲಾವೃತವಾಗಿವೆ, ಜನರು ಸಂಕಷ್ತಕ್ಕೀಡಾಗಿದ್ದಾರೆ, ಊರಿಗೆ ಊರೇ ಹೊತ್ತಿ ಉರಿಯುತ್ತಿರುವಾಗ ಸಿಎಂ ಯಡಿಯೂರಪ್ಪನವರು ಶಿಕಾರಿಪುರಕ್ಕೆ ಹೋಗಿ ಕುಳಿತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜನರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಸಹಾಯ ಮಾಡುವ ಕನಿಷ್ಠ ಸೌಜನ್ಯವೂ ಇಲ್ಲ. ಚುನಾವಣೆಗೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿರುವ ಬಿಜೆಪಿ ನಾಯಕರು, ಪ್ರವಾಹದಿಂದ ಪರಿತಪಿಸುತ್ತಿರುವ ಜನರಿಗೆ ಹಂಚುತ್ತಿಲ್ಲವೇಕೇ..? ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಸಿಎಂ ಆಗಿಲ್ಲ, ಶಿಕಾರಿಪುರದ ಸಿಎಂ ಆಗಿದ್ದಾರೆ ಎಂದು ಗುಡುಗಿದ್ದಾರೆ.
ಇದೇ ವೇಳೆ ಕೆ.ಆರ್. ಪೇಟೆಯಂತೆ ಶಿರಾ ಮುಗಿಸ್ತೀನಿ ಎಂದಿರುವ ಬಿ. ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಜನರಿಗೆ ಮದ್ಯ ಕುಡಿಸಿ ಬೀದಿಯಲ್ಲಿ ಮಲಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಯುವಕರಿಗೆ ಮದ್ಯ ಕುಡಿಸಿದ್ದಾರೆ. ಪಾಪದ ಹಣದೊಂದಿಗೆ ಶಿರಾದಲ್ಲಿ ಕುಳಿತಿದ್ದಾರೆ. ಅದೇ ಹಣವನ್ನು ಬೀದಿಯಲ್ಲಿ ಇರುವ ಜನರಿಗೆ ಹಂಚಬಹುದಿತ್ತು ಎಂದು ಹೇಳಿದರು.