ಮಂಗಳೂರು: ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ ಅಪ್ರಾಪ್ತ ಬಾಲಕಿಗೆ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಮನಬಂದಂತೆ ಥಳಿಸಿದ್ದು, ಇದೀಗ ಪೊಲೀಸ್ ಪೇದೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದಾನೆ ಎಂದು ನೊಂದ 16 ವರ್ಷದ ಯುವತಿ ಹಾಗೂ ಆಕೆಯ ಪೋಷಕರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಮಹಿಳಾ ಪೊಲೀಸ್ ಪೇದೆ ಯುವತಿಗೆ ಲಾಠಿಯಿಂದ ಥಳಿಸಿದ್ದಾರೆ. ಮಹಿಳಾ ಸಿಬ್ಬಂದಿಯ ವಿರುದ್ಧ ಯುವತಿ ಹಾಗೂ ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಎಫ್ಐಆರ್ ದಾಖಲಾಗಿದೆ.
ಸಿಡಬ್ಲ್ಯುಸಿ ತಂಡದವರು ಕೂಡ ಬಾಲಕಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದು, ಮಹಿಳಾ ಪೊಲೀಸ್ ಪೇದೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.