ಕೊರೊನಾ ಕಾರಣಕ್ಕೆ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ರಾಜ್ಯದ ಆರ್ಥಿಕತೆ ಕುಸಿತ ಕಂಡಿದ್ದು, ಇದರ ಪುನಶ್ಚೇತನಕ್ಕಾಗಿ ಸರ್ಕಾರ ಕೆಲವೊಂದು ವಹಿವಾಟುಗಳನ್ನು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ಅವಕಾಶ ನೀಡಿದೆ. ಶನಿವಾರದಂದು ಈ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸರ್ಕಾರದ ಹೊಸ ನಿಯಮದ ಅನ್ವಯ ಬೆಂಗಳೂರು ಮಹಾನಗರ ಸೇರಿದಂತೆ ನಗರ ಪ್ರದೇಶಗಳಲ್ಲಿ ಅಂಗಡಿಗಳು, ಮಾಲ್, ಹೋಟೆಲ್, ರೆಸ್ಟೋರೆಂಟ್ ಹಾಗೂ ಸೂಪರ್ ಮಾರ್ಕೆಟ್ ಗಳು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ ಮದ್ಯ ಮಾರಾಟ ಮಳಿಗೆ ಮತ್ತು ಚಿತ್ರಮಂದಿರಗಳಿಗೆ ಸದ್ಯಕ್ಕೆ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸದಿರಲು ತೀರ್ಮಾನಿಸಲಾಗಿದೆ.
ಹತ್ತಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಮಳಿಗೆಗಳು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬಹುದಾಗಿದ್ದು, ಮಹಿಳೆಯರು ಲಿಖಿತ ಸಮ್ಮತಿ ಪಡೆದು ಅವರೂ ಸಹ ರಾತ್ರಿ ವೇಳೆ ಕೆಲಸ ಮಾಡಬಹುದಾಗಿದೆ. ಉದ್ಯೋಗಿಗಳ ಕೆಲಸದ ಅವಧಿ ದಿನಕ್ಕೆ 8 ಗಂಟೆ ಮೀರಬಾರದು ಎಂದು ಸೂಚಿಸಲಾಗಿದ್ದು, ಜೊತೆಗೆ ಎಲ್ಲಾ ಕಾರ್ಮಿಕರಿಗೆ ವಾರದ ರಜೆ ಒದಗಿಸಲು ತಿಳಿಸಲಾಗಿದೆ.