ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ ಯಾಣ. ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗಲು ಹೇಳಿ ಮಾಡಿಸಿದ ತಾಣವಿದು. ನಗರದ ಜಂಜಾಟವನ್ನೆಲ್ಲಾ ಮರೆತು ಶುದ್ಧವಾದ ಗಾಳಿ ಸೇವಿಸುತ್ತಾ, ದಟ್ಟವಾದ ಕಾಡಲ್ಲಿ ವಿಹರಿಸುತ್ತಾ, ಹಕ್ಕಿಗಳ ಚಿಲಿಪಿಲಿ, ನೀರಿನ ಜುಳುಜುಳು ನಾದವನ್ನು ಸವಿಯುತ್ತಾ ದಿನ ಕಳೆಯಬಹುದು.
ಇಲ್ಲಿ ಕಾಣಿಸುವ ಎರಡು ಎತ್ತರವಾದ ಬಂಡೆಗಳೇ ಇಲ್ಲಿನ ವಿಶೇಷತೆ. ಒಂದು ಬಂಡೆಯನ್ನು ಮೋಹಿನಿ ಶಿಖರ ಮತ್ತೊಂದನ್ನು ಭೈರವೇಶ್ವರ ಶಿಖರ ಎಂದು ಕರೆಯುತ್ತಾರೆ. ಭೈರವೇಶ್ವರ ಬಂಡೆಯಲ್ಲಿ ಒಂದು ಸಣ್ಣ ಗುಹೆ ಇದೆ. ಶಿವಲಿಂಗ ಹಾಗೂ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ.
ಶಿವರಾತ್ರಿ ವೇಳೆ ಅಪಾರ ಭಕ್ತಸಾಗರ ಇಲ್ಲಿಗೆ ಹರಿದು ಬರುತ್ತದೆ. ಸ್ವಲ್ಪ ಕೆಳಗೆ ಗಣಪತಿ ದೇವಸ್ಥಾನವಿದೆ. ಇನ್ನೂ ಸ್ವಲ್ಪ ದೂರದಲ್ಲಿ ಹರಿಯುವ ನದಿಯಿದೆ. ದೊಡ್ಡ ಶಿಖರಗಳು ಟ್ರೆಕ್ಕಿಂಗ್ ಮಾಡುವವರಿಗೆ ನೆಚ್ಚಿನ ತಾಣವಾಗಿದೆ.
ದಟ್ಟ ಅರಣ್ಯದಲ್ಲಿ ನಡೆಯುವಾಗ ತುಸು ಜಾಗೃತೆ ಇರಬೇಕು. ಮಣ್ಣು ನುಣುಪಾಗಿದ್ದು ಅಲ್ಲಲ್ಲಿ ಜಾರುತ್ತದೆ. ಮರಗಳು ಹೆಚ್ಚಿರುವುದರಿಂದ ಉಂಬಳಗಳ ಕಾಟವೂ ಹೆಚ್ಚು. ಇಲ್ಲಿ ಅತಿ ಹೆಚ್ಚು ಮಳೆಯಾಗುವುದರಿಂದ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳಲ್ಲಿ ಇಲ್ಲಿಗೆ ಹೋಗುವುದು ಸೂಕ್ತ. ಹತ್ತಿರದ ಪೇಟೆಯೆಂದರೆ ಶಿರಸಿ. ಅಲ್ಲಿ ಉತ್ತಮ ವ್ಯವಸ್ಥೆಯಿರುವ ಹೋಟೆಲ್ ಗಳಿವೆ. ಬೆಂಗಳೂರಿನಿಂದ 460 ಕಿ.ಮೀ. ದೂರದಲ್ಲಿ ಹಾಗೂ ಶಿರಸಿಯಿಂದ 40 ಕಿ.ಮೀ. ದೂರದಲ್ಲಿದೆ.