ಬೆಂಗಳೂರು: ನನ್ನ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ. ಇಂದು ಬೆಳಿಗ್ಗೆಯಿಂದ ಫೋನ್ ಟ್ಯಾಪ್ ಆಗಿದ್ದು ಯಾವುದೇ ಕರೆಗಳು ಬರುತ್ತಿಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಒಮ್ಮೆ ನನ್ನ ಫೋನ್ ಕದ್ದಾಲಿಕೆಯಾಗಿತ್ತು. ಇದೀಗ ಮತ್ತೆ ಕದ್ದಾಲಿಕೆ ಮಾಡಲಾಗುತ್ತಿದೆ. ನಮ್ಮ ಸುದರ್ಶನ್ ಅವರು ಬೆಳಿಗ್ಗೆಯಿಂದ ಬರೋಬ್ಬರಿ 25 ಬಾರಿ ಫೋನ್ ಮಾಡಿದ್ದಾರೆ. ಆದರೆ ಒಂದೇ ಒಂದು ಕರೆ ಕೂಡ ಬಂದಿಲ್ಲ. ನನ್ನ ಫೋನ್ ಟ್ಯಾಪಿಂಗ್ ಮಾಡುತ್ತಿರುವುದು ನೂರಕ್ಕೆ ನೂರರಷ್ಟು ನಿಜ ಎಂದಿದ್ದಾರೆ.
ನನ್ನ ಫೋನ್ ಕದ್ದಾಲಿಕೆಯಾಗುತ್ತಿರುವ ಬಗ್ಗೆ ದೂರು ನೀಡುತ್ತಿದ್ದೇನೆ. ನಾವು ಮೂವತ್ತು ವರ್ಷಗಳಿಂದ ರಾಜಕಾರಣದಲ್ಲಿದ್ದೇವೆ. ಗೃಹ ಇಲಾಖೆ ಬಗ್ಗೆಯೂ ಗೊತ್ತಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.