ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ತೀವ್ರವಾಗಿ ಹೆಚ್ಚಳವಾಗುತ್ತಿದ್ದು, ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಆದರೆ ಅವರುಗಳಿಗೆ ಅಗತ್ಯವಾದ ಆಕ್ಸಿಜನ್ ಹಾಗೂ ರೆಮ್ ಡಿಸಿವರ್ ಇಂಜೆಕ್ಷನ್ ಕೊರತೆ ಎದುರಾಗಿತ್ತು.
ಇದರಿಂದ ಕೆಲವು ರೋಗಿಗಳು ಸಾವನ್ನಪ್ಪಿದ್ದು ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆಕ್ಸಿಜನ ಹಾಗೂ ರೆಮ್ ಡಿಸಿವರ್ ಕೊರತೆಯಿರುವ ವಿಚಾರವನ್ನು ಪ್ರಸ್ತಾಪಿಸಿ, ಸಕಾಲಕ್ಕೆ ಇದು ಲಭ್ಯವಾಗದಿದ್ದರೆ ಕೆಲ ಆಸ್ಪತ್ರೆಗಳನ್ನೇ ಮುಚ್ಚಬೇಕಾಗುತ್ತದೆ ಎಂದು ನಿಷ್ಠುರವಾಗಿ ಹೇಳಿದ್ದರು.
ಇದೀಗ ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸಿದ್ದು, ರಾಜ್ಯಕ್ಕೆ ನಿಗದಿಯಾಗಿದ್ದ 300 ಮೆಟ್ರಿಕ್ ಟನ್ ಆಕ್ಸಿಜನ್ ಪ್ರಮಾಣವನ್ನು 800 ಮೆಟ್ರಿಕ್ ಟನ್ ಗೆ ಹೆಚ್ಚಿಸಿದೆ. ಅದೇ ರೀತಿ ರೆಮ್ ಡಿಸಿವರ್ ಹಂಚಿಕೆಯನ್ನು 50 ಸಾವಿರದಿಂದ 1,22,000 ಕ್ಕೆ ಹೆಚ್ಚಿಸಲಾಗಿದೆ. ಏಪ್ರಿಲ್ 30ರ ವರೆಗೂ ಇದು ಮುಂದುವರಿಯಲಿದೆ ಎಂದು ತಿಳಿದುಬಂದಿದೆ.