ಬೆಂಗಳೂರು: ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಓರ್ವ ಡೋಂಗಿ ರೈತ ನಾಯಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಮುಗಿಸಲು ಹೊರಟಿವೆ. ಸಿಎಂ ಯಡಿಯೂರಪ್ಪ ರೈತರ ಪರವಾಗಿದ್ದರೆ ಎಪಿಎಂಸಿ ಕಾಯ್ದೆ ತಿದ್ದುಪಡಿ ತರುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆ ಮಾಡಬಾರದು ಎಂದು ಕೊರೊನಾ ಸಂದರ್ಭದಲ್ಲೇ ಕಾಯ್ದೆ ತಿದ್ದುಪಡಿ ತಂದಿದ್ದಾರೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ಲವೇ. ಎಪಿಎಂಸಿ ಕಾಯ್ದೆ ತಿದ್ದುಪಡಿ ಅಮಿತ್ ಶಾ ಮಾಡುತ್ತಿರುವುದು. ಈ ಹಿಂದೆ ನಾನು ಸಿಎಂ ಆಗಿದ್ದಾಗಲೂ ನನಗೂ ಹೇಳಿದ್ದರು. ಆದರೆ ನಾನು ಕಾಯ್ದೆಯನ್ನು ಮೂಲೆಗೆ ಎಸೆದಿದ್ದೆ. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಯ ಬಗ್ಗೆ ತಲೆ ಹಾಕುವಂತಿಲ್ಲ. ಆದರೂ ಕೇಂದ್ರ ಸರ್ಕಾರ ಮಸೂದೆ ತಿದ್ದುಪಡಿ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇದನ್ನು ವಿರೋಧಿಸದೆ ಕೇಂದ್ರ ನಾಯಕರಿಗೆ ತಲೆ ಅಲ್ಲಾಡಿಸಿ ಬಂದಿದ್ದಾರೆ ಎಂದು ಗುಡುಗಿದ್ದಾರೆ.