ಕಳೆದ ಕೆಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಮತ್ತೆ ಗರಿಗೆದರಿದೆ. ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಯಡಿಯೂರಪ್ಪನವರು ನವದೆಹಲಿಗೆ ತೆರಳಿದ್ದಾರೆ ಎಂಬ ಮಾತುಗಳ ಮಧ್ಯೆ ಸಚಿವಾಕಾಂಕ್ಷಿಗಳ ಲಾಬಿ ಶುರುವಾಗಿದೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸಿದ್ದು, ಇದರ ಜೊತೆಗೆ ತಮಗೆಲ್ಲಿ ಸಚಿವ ಸ್ಥಾನ ತಪ್ಪುವುದೋ ಎಂಬ ಆತಂಕದಲ್ಲಿ ಕೆಲವರು ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಯಡಿಯೂರಪ್ಪನವರು ಕೇಂದ್ರ ಬಿಜೆಪಿ ನಾಯಕರ ಒಪ್ಪಿಗೆ ಸಿಕ್ಕರೆ ನಾಲ್ವರು ಹಾಲಿ ಸಚಿವರನ್ನು ಕೈಬಿಡಲಿದ್ದಾರೆ ಎನ್ನಲಾಗುತ್ತಿದ್ದು, ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಆರ್. ಶಂಕರ್, ವಿಧಾನಸಭಾ ಸದಸ್ಯರಾದ ಉಮೇಶ್ ಕತ್ತಿ, ಎಸ್. ಅಂಗಾರ, ಜಿ.ಎಚ್. ತಿಪ್ಪಾರೆಡ್ಡಿ, ಅರವಿಂದ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ್, ಎಂ.ಪಿ. ರೇಣುಕಾಚಾರ್ಯ ಅವರುಗಳಿಗೆ ಸಚಿವ ಸ್ಥಾನ ಕಲ್ಪಿಸುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.