ಬೆಂಗಳೂರು: ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿಯೂ ಸಿಎಂ ಬಿ.ಎಸ್. ಯಡಿಯೂರಪ್ಪ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಎರಡನೇ ಅಲೆ ಸಂದರ್ಭದಲ್ಲಿಯೂ ಅವರಿಗೆ ಪಾಸಿಟಿವ್ ಬಂದಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡು ದಿನಗಳಿಂದ ಜ್ವರದ ನಡುವೆಯೂ ಉಪ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಎಂ ಯಡಿಯೂರಪ್ಪ, ಇಂದು ಬೆಳಿಗ್ಗೆ ಕೋವಿಡ್ ನಿಯಂತ್ರಣಕ್ಕಾಗಿ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದರು. ಸಚಿವ ಡಾ. ಸುಧಾಕರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆ ಬಳಿಕ ಸಿಎಂ ಯಡಿಯೂರಪ್ಪ ಆರ್ಟಿಪಿಸಿ ಆರ್ ಹಾಗೂ ಸಿಟಿ ಸ್ಕ್ಯಾನ್ ಗೆ ಒಳಗಾಗಿದ್ದು ಸೋಂಕು ದೃಢಪಟ್ಟಿದೆ. ಇದೀಗ ಸಿಎಂ ಜೊತೆ ಸಭೆಯಲ್ಲಿ ಭಾಗಿಯಾದವರು ಸೇರಿದಂತೆ ಸಿಎಂ ಸಂಪರ್ಕದಲ್ಲಿರುವ ಎಲ್ಲರಲ್ಲೂ ಆತಂಕ ಮನೆಮಾಡಿದೆ.
ಸಿಎಂ ಯಡಿಯೂರಪ್ಪಗೆ ಮತ್ತೆ ಕೊರೊನಾ ಸೋಂಕು ದೃಢ
ಇದೇ ವೇಳೆ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದು, ಜ್ವರದ ಹಿನ್ನಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ನಲ್ಲಿದ್ದು, ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.