ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಜೊತೆಗಿನ ಜೆಡಿಎಸ್ ಮೈತ್ರಿ ಮುರಿದು ಬಿದ್ದಿದ್ದು, ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಬಗ್ಗೆ ಸಿದ್ದರಾಮಯ್ಯ ಲಘುವಾಗಿ ಮಾತನಾಡಿದ್ದಾರೆ. ಪದೇ ಪದೇ ನಮ್ಮ ಪಕ್ಷವನ್ನು ಕೆಣಕುವ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಎಂಬುದು ಈಗ ಎಲ್ಲಿದೆ? ಜೆಡಿಎಸ್ ಒಂದು ಪಕ್ಷವೇ ಅಲ್ಲ ಎಂದೆಲ್ಲ ಹೇಳುತ್ತಿದ್ದಾರೆ. ಹಾಗಾಗಿ ಜೆಡಿಎಸ್ ಶಕ್ತಿಯನ್ನು ತೋರಿಸುವ ನಿಟ್ಟಿನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.
ರಾಜ್ಯದ ಉಪಚುನಾವಣೆ ಸೇರಿ 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ ಬಗ್ಗೆ ಇಂದು ಚರ್ಚೆ
ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಗೂ ನನ್ನ ಜೊತೆ ಮಾತನಾಡಲು ಬಿಡುತ್ತಿಲ್ಲ. ನನ್ನೊಂದಿಗೆ ಮಾತನಾಡದಂತೆ ಒತ್ತಡ ಹೇರುತ್ತಿದ್ದಾರೆ. ನಾವು ಇಲ್ಲಿ ಯಾರಿಗೂ ಸವಾಲು ಹಾಕಲು ಬಂದಿಲ್ಲ. ಕಿಂಗ್ ಮೇಕರ್ ಆಗಲೂ ಬಯಸುತ್ತಿಲ್ಲ. ನಮ್ಮದೇನಿದ್ದರೂ 2023ರ ಚುನಾವಣೆ ಮೇಲೆ ಗುರಿ ಎಂದು ಹೇಳಿದರು.
ಇನ್ನು ಬಿಜೆಪಿಯಿಂದಲೂ ನಾವು ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ರಾಜ್ಯವನ್ನು ಬಿಜೆಪಿ ಲಘುವಾಗಿ ಪರಿಗಣಿಸುತ್ತಿದೆ. ಅಧಿಕಾರ ಸಿಗದಿದ್ದರೂ ತೊಂದರೆಯಿಲ್ಲ. ಅಂತರ ಕಾಯ್ದುಕೊಳ್ಳುವುದು ಮುಖ್ಯ ಎಂದರು.