ಮೈಸೂರು: ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ನಡುವೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ ಡ್ಯಾಂ ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ್ದಾರೆ. ಪರಿಣಾಮ ಕಪಿಲಾ ನದಿ ತೀರದ ಜನತೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕಬಿನಿ ಜಲಾಶಯದಲ್ಲಿ ನೀರು ಹೆಚ್ಚಿದ ಬೆನ್ನಲ್ಲೇ ಅಧಿಕಾರಿಗಳು ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದಿಂದ ಏಕಾಏಕಿ 35 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟಿದ್ದಾರೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸದೇ, ಯಾವುದೇ ಮುನ್ಸೂಚನೆಯನ್ನೂ ನೀಡದೇ ಅಧಿಕಾರಿಗಳು ಮಾಡಿರುವ ಎಡವಟ್ಟಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡ್ಯಾಂ ನಿಂದ ನೀರು ಹೊರಬರುತ್ತಿದಂತೆಯೇ ಬಿದರಳ್ಳಿ ಬಳಿ ಸಂಪರ್ಕ ಸೇತುವೆ ಮುಳುಗುವ ಹಂತ ತಲುಪಿದೆ. ಸೇತುವೆ ಮೇಲೆ ನೀರು ಹರಿದ ಪರಿಣಾಮ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಇದೀಗ ಅಧಿಕಾರಿಗಳು ಡ್ಯಾಂನಿಂದ ಹೊರ ಬಿಡುವ ನೀರಿನ ಪ್ರಮಾಣ ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ. ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹೆಚ್ಚಿದ್ದರಿಂದ ಜನ-ಜಾನುವಾರಗಳು ಸುರಕ್ಷಿತ ಸ್ಥಳಕ್ಕೆ ಸಾಗುತ್ತಿದ್ದಾರೆ.