
ರಾಜರಾಜೇಶ್ವರಿ ನಗರದ ಬೈ ಎಲೆಕ್ಷನ್‌ಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ಸಿಕ್ಕಿದ ಬೆನ್ನಲ್ಲೇ ಇದೀಗ ರಾಜಕೀಯ ಚಟುವಟಿಕೆಗಳು ಮೂರು ಪಕ್ಷದಲ್ಲಿ ಗರಿಗೆದರಿವೆ. ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಕುತೂಹಲ ಇದ್ದೇ ಇದೆ. ಇದರ ಮಧ್ಯೆ ಇಂದು ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ದಿವಂಗತ ಡಿ.ಕೆ. ರವಿ ಪತ್ನಿ ಕುಸುಮ ಹಾಗೂ ಅವರ ತಂದೆ ಹನುಮಂತರಾಯಪ್ಪ ಭೇಟಿ ನೀಡಿ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದರು.
ಇವರ ಭೇಟಿ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಏಕೆಂದರೆ ಆರ್.ಆರ್. ನಗರದ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿ ಡಿ.ಕೆ. ರವಿ ಪತ್ನಿ ಕುಸುಮ ಇದ್ದಾರೆ. ಹೀಗಾಗಿಯೇ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದರಾ ಎಂಬ ಚರ್ಚೆ ಶುರುವಾಗಿದೆ.
ಇನ್ನು ಚುನಾವಣೆ ಸಂಬಂಧ ಮಾತನಾಡಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಜೆಡಿಎಸ್ ಮುಖಂಡ ಹನುಮಂತರಾಯಪ್ಪ, ಮುನಿರತ್ನ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದಿದ್ದಾರೆ. ಮಗಳು ಚುನಾವಣೆ ನಿಲ್ಲುವ ಬಗ್ಗೆ ಕುಟುಂಬದಲ್ಲಿ ಚರ್ಚೆಯಾಗುತ್ತಿದೆ. ನನಗೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಲಾಗಿದೆ. ಆದರೆ ಮಗಳ ಮುಂದಿನ ಭವಿಷ್ಯ ಮುಖ್ಯ. ಸ್ಪರ್ಧೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.