ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ಗಾಗಿ ಮತ್ತೆ ಪರದಾಡುತ್ತಿದ್ದಾರೆ. ಈ ನಡುವೆ ಬಿಬಿಎಂಪಿ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಬೆಡ್ ಬಡಿದಾಟ ಮುಂದುವರೆದಿದ್ದು ಇದೀಗ ಆಸ್ಪತ್ರೆಗಳಿಗೆ ಬೀಗ ಜಡಿಯುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಬಿಬಿಎಂಪಿಯಿಂದ ದಾಖಲಾಗುವ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್ ಗಳನ್ನು ನೀಡಬೇಕು ಎಂಬ ನಿಯಮವಿದೆ. ಆದಾಗ್ಯೂ ಖಾಸಗಿ ಆಸ್ಪತ್ರೆಗಳು ನಿಯಮ ಉಲ್ಲಂಘನೆ ಮಾಡಿವೆ. ಅಲ್ಲದೇ ದಾಖಲಾಗಿರುವ ಕೊರೊನಾ ಸೋಂಕಿತರಿಂದ ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು ಇದೀಗ 7 ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್ ನೋಟೀಸ್ ನೀಡಿದ್ದು, ಓಪಿಡಿ ಬಂದ್ ಮಾಡಿ, ಆಸ್ಪತ್ರೆಗಳಲ್ಲಿರುವ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಿ ಆಸ್ಪತ್ರೆಗಳಿಗೆ ಬೀಗ ಜಡಿಯುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.