ಉತ್ತರ ಕರ್ನಾಟಕದವರೇ ಮುಂದಿನ ಸಿಎಂ. ಬಿಎಸ್ವೈ, ಸಿಎಂ ಆಗಿ ಬಹಳ ದಿನ ಇರೋದಿಲ್ಲ ಅಂತ ವಿಜಯಪುರದಲ್ಲಿ ವಾರ್ಡ್ 3 ರಲ್ಲಿ ನಡೆದ ಹನುಮಾನ ದೇವಸ್ಥಾನದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ನಾಯಕರು ಕೆಂಡಾಮಂಡಲರಾಗೋದ್ರ ಜೊತೆಗೆ ಯತ್ನಾಳ್ ವಿರುದ್ಧ ಶಿಸ್ತು ಕ್ರಮವನ್ನು ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಈ ಹೇಳಿಕೆಗಳ ಜಟಾಪಟಿ ಮತ್ತೆ ಮುಂದುವರೆದಿದೆ.
ಹೌದು, ಇದೀಗ ಮತ್ತೆ ಬಿಜೆಪಿ ನಾಯಕರ ಹೇಳಿಕೆಗಳಿಗೆ ಯತ್ನಾಳ್ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ. ಕರ್ನಾಟಕದ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಆತ್ಮಸಾಕ್ಷಿಯಾಗಿ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ ಹೊರತು ಸಚಿವನಾಗುವುದಕ್ಕೆ ಯಾರದ್ದೋ ಕಾಲು ಹಿಡಿದು ತಲೆ ಹಿಡಿಯುವ ಕೆಲಸ ಮಾಡಿಲ್ಲ ಅದು ನನ್ನ ಜಾಯಮಾನ ಅಲ್ಲ ಎಂದಿದ್ದಾರೆ.
ಇನ್ನು ಇದರ ಜೊತೆಗೆ ಯತ್ನಾಳ್ ಅಭಿಮಾನಿಗಳು ಕೂಡ ಯತ್ನಾಳ್ ವಿರುದ್ಧ ಮಾತನಾಡಿದ ಬಿಜೆಪಿ ನಾಯಕರುಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಉತ್ತರ ಕರ್ನಾಟಕದವರ ಬಗ್ಗೆ ಮಾತನಾಡಿದರೆ ಸರಿ ಇರುವುದಿಲ್ಲ. ಇಲ್ಲಿನ ಜನ ಕ್ಷಮಿಸೋದಿಲ್ಲ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.