ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಮುಂದಿನ ನಾಲ್ಕು ತಿಂಗಳಲ್ಲಿ ದಿ.ಸುರೇಶ್ ಅಂಗಡಿಯವರು ಮುಖ್ಯಮಂತ್ರಿಯಾಗುವವರಿದ್ದರು. ಆದರೆ ಅಷ್ಟರಲ್ಲೇ ಅವರು ನಮ್ಮನ್ನು ಅಗಲಿದ್ದಾರೆ ಎಂದು ಸುರೇಶ್ ಅಂಗಡಿ ಸೋದರಮಾವ ಲಿಂಗರಾಜ್ ಪಾಟೀಲ್ ತಿಳಿಸಿದ್ದಾರೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಇತ್ತೀಚೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ವೇಳೆ ನಡೆದಿದ್ದ ರಾಜ್ಯ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಗ್ಗೆ ಇದೀಗ ಪ್ರತಿಕ್ರಿಯಿಸಿರುವ ಲಿಂಗರಾಜ್ ಪಾಟೀಲ್, ಕೆಲ ತಿಂಗಳ ಹಿಂದೆ ಕರ್ನಾಟಕ ಉಸ್ತುವಾರಿ ಮುರಳೀಧರ್ ರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುರೇಶ್ ಅಂಗಡಿಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆಯಾಗಿತ್ತು. ಈ ಬಗ್ಗೆ ಸ್ವತಃ ಸುರೇಶ್ ನನಗೆ ಹೇಳಿದ್ದರು ಎಂದಿದ್ದಾರೆ.
ಸುರೇಶ್ ಅಂಗಡಿ ನಿಧನ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬೆಳಗಾವಿಯ ಅಂಗಡಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಸುರೇಶ್ ಅಂಗಡಿ ಸೋದರಮಾವ ಲಿಂಗರಾಜ್ ಪಾಟೀಲ್, ಸುರೇಶ್ ಅಂಗಡಿಯವರಿಂದ ತೆರವಾದ ಲೋಕಸಭಾ ಕ್ಷೇತ್ರದ ಸ್ಥಾನಕ್ಕೆ ಅಂಗಡಿ ಕುಟುಂಬದವರಿಗೆ ಟಿಕೆಟ್ ನಿಡಬೇಕು. ಸುರೇಶ್ ಅಂಗಡಿ ಪತ್ನಿ ಮಂಗಲಾ, ಮಕ್ಕಳಾದ ಸ್ಪೂರ್ತಿ, ಶ್ರದ್ಧಾ ಇವರ ಪೈಕಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನಿಡಬೇಕು ಎಂದು ಮನವಿ ಮಾಡಿದ್ದಾರೆ.