ಸಾರ್ವಜನಿಕರನ್ನು ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಹೀಗಾಗಿಯೇ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗುರುವಾರದಂದು ಮಾಸ್ಕ್ ದಿನಾಚರಣೆ ಆಚರಿಸಲಾಗಿದೆ.
ಆದರೆ ಈ ಸಂದರ್ಭದಲ್ಲಿ ಜನರಿಗೆ ತಿಳಿ ಹೇಳಬೇಕಾದ ಪೊಲೀಸ್ ಪೇದೆಯೊಬ್ಬರು ಮಾಸ್ಕ್ ಧರಿಸದೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇಂತಹುದೊಂದು ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮಾಸ್ಕ್ ದಿನಾಚರಣೆ ಜಾಥಾಗೆ ಚಾಲನೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಬಳಿಕ ಹಳೆ ಬಸ್ ನಿಲ್ದಾಣದ ಬಳಿ ಚೀತಾ ಬೈಕ್ ನಲ್ಲಿ ಮಾಸ್ಕ್ ಹಾಕದೆ ಬರುತ್ತಿದ್ದ ಪೇದೆಗೆ ಅಡ್ಡ ಹಾಕಿದ್ದಾರೆ.
ಅಲ್ಲದೆ 200 ರೂ. ದಂಡ ಕಟ್ಟುವಂತೆ ಸೂಚಿಸಿದ್ದು, ಆಗ ಪೇದೆ ವಾದಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಸ್ವತಃ ಜಿಲ್ಲಾ ರಕ್ಷಣಾಧಿಕಾರಿಗಳೇ ಹಣ ನೀಡಲು ಮುಂದಾಗಿದ್ದು, ಬಳಿಕ ಮರು ಮಾತನಾಡದೆ ಪೇದೆ ದಂಡ ಪಾವತಿಸಿ ಅಲ್ಲಿಂದ ತೆರಳಿದ್ದಾರೆ.