ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ರಾಜ್ಯದಲ್ಲೂ ಕೂಡ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಬುಧವಾರ ಒಂದೇ ದಿನ 2298 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ ಬೆಂಗಳೂರು 1398, ಕಲಬುರಗಿ 118, ತುಮಕೂರು 94, ಬೀದರ್ 82 ಹಾಗೂ ಉಡುಪಿಯಲ್ಲಿ 79 ಹೀಗೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಇದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ, ಹಲವು ನಿರ್ಬಂಧಗಳನ್ನು ಜಾರಿಗೆ ತಂದಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಕಾರಣ ಮಾಸ್ಕ್ ಧರಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಲಾಗಿದೆ.
ಕೊರೋನಾ ತಡೆಗೆ ಕಠಿಣ ನಿಯಮ ಜಾರಿ, 100 ರೂ.ನಿಂದ 10 ಸಾವಿರ ರೂ.ವರೆಗೆ ದಂಡ
ಈವರೆಗೆ ಮಾಸ್ಕ್ ಧರಿಸದವರಿಗೆ ಮಾರ್ಷಲ್ ಗಳು ಮಾತ್ರ ದಂಡ ವಿಧಿಸುತ್ತಿದ್ದು, ಇದೀಗ ಸರ್ಕಾರದ ಪರಿಷ್ಕೃತ ಆದೇಶದ ಪ್ರಕಾರ ಹೆಡ್ ಕಾನ್ಸ್ಟೇಬಲ್ ಸಹ ದಂಡ ವಿಧಿಸಬಹುದಾಗಿದೆ. ಇದರ ಜೊತೆಗೆ ಬಿಲ್ ಕಲೆಕ್ಟರ್, ಹೆಲ್ತ್ ಇನ್ಸ್ಪೆಕ್ಟರ್, ಪಿಡಿಓ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೂಡ ದಂಡ ವಿಧಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಮಾಸ್ಕ್ ಧರಿಸದವರಿಗೆ ನಗರಪ್ರದೇಶದಲ್ಲಿ 250 ರೂಪಾಯಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 100 ರೂಪಾಯಿ ದಂಡ ವಿಧಿಸಲಾಗುತ್ತದೆ.