ಬಾಗಲಕೋಟೆ: ನಂಜನಗೂಡು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಡಾ. ನಾಗೇಂದ್ರ ಮಾನಸಿಕ ಹಿಂಸೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಆತ್ಮಹತ್ಯೆಗೆ ಪ್ರಚೋದಿಸುವುದನ್ನು ಕ್ಷಮಿಸಲಾಗದು. ಹಿರಿಯ ಅಧಿಕಾರಿಗಳ ಒತ್ತಡದಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಜೀವದ ಹಂಗು ತೊರೆದು ಕೊರೊನಾ ವಾರಿಯರ್ಸ್ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಗೌರವದಿಂದ ಮಾತನಾಡಬೇಕು. ಅದನ್ನು ಬಿಟ್ಟು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಅಗೌರವದಿಂದ ಹೇಳಿಕೆ ನೀಡುತ್ತಿದ್ದಾರೆ. ವೈದ್ಯರು ಹೋದರೆ ತೊಂದರೆಯಾಗುವುದು ಸುಧಾಕರ್ ಗಲ್ಲ. ಅವರು ಮಂತ್ರಿಯಾಗಿದ್ದಾರೆ. ತೊಂದರೆಯಾಗುವುದು ಜನಸಾಮಾನ್ಯರಿಗೆ. ಕೊರೊನಾ ವಾರಿಯರ್ಸ್ ಎನ್ನುತ್ತಾರೆ, ಹೂಮಳೆ ಸುರಿಸುತ್ತಾರೆ. ಕಷ್ಟವಾದರೆ ಕೆಲಸಬಿಟ್ಟು ಹೋಗಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಕೊವಿಡ್ ಸಲಕರಣೆಗಳ ಖರೀದಿಯಲ್ಲಿ ಭ್ರಷ್ಟಾಚಾರ ವಿಚಾರವಾಗಿ ಮಾತನಾಡಿದ ಪಾಟೀಲ್, ಸಂಕಷ್ಟದ ಸಂದರ್ಭದಲ್ಲಿ ಭ್ರಷ್ಟಾಚಾರ ನಾಚಿಕೆಗೇಡಿನ ಸಂಗತಿ. ಬಿಜೆಪಿ ಅಜೆಂಡಾ ಜನರ ಬಗ್ಗೆ ಚಿಂತನೆಯದ್ದಲ್ಲ. ಬಿಜೆಪಿಗೆ ಜನರ ಕಷ್ಟ, ದು:ಖ, ದುಮ್ಮಾನಗಳ ಬಗ್ಗೆ ಕಾಳಜಿಯಿಲ್ಲ. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಸರ್ಕಾರ ರಚಿಸಿದ್ದಾರೆ ಎಂದರೆ ಅವರ ಅಜೆಂಡಾ ಬೇರೆಯದೇ ಇರುತ್ತದೆ ಎಂದು ಕಿಡಿಕಾರಿದರು.