
ಬೆಂಗಳೂರಿನ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ನಡೆದ ದಾಳಿ ಬಗ್ಗೆ ಅಖಂಡ ಶ್ರೀನಿವಾಸ ಮೂರ್ತಿ ಸುದ್ದಿಗೋಷ್ಠಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಶ್ರೀನಿವಾಸಮೂರ್ತಿ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ ಎಂದು ಸರ್ಕಾರಕ್ಕೆ ಮನವಿ ಮಾಡ್ತೇನೆ. ಜನಪ್ರತಿನಿಧಿಗೆ ರಕ್ಷಣೆ ಇಲ್ಲದೆ ಹೋದ್ರೆ ಕಷ್ಟ. ಲಾಂಗ್, ಮಚ್ಚುಗಳಿಂದ ದಾಳಿ ನಡೆದಿದೆ. ಮನೆಗೆ ಬೆಂಕಿ ಹಚ್ಚಿ ಹಾಳು ಮಾಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಕುಟುಂಬಸ್ಥರು ಸುರಕ್ಷಿತವಾಗಿದ್ದಾರೆಂದು ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ನವೀನ್ ಬಗ್ಗೆ ಉತ್ತರ ನೀಡಿದ ಶ್ರೀನಿವಾಸಮೂರ್ತಿ ನವೀನ್ ಅಕ್ಕನ ಮಗ. ಅವನ ಜೊತೆ ನಾನು ಸಂಬಂಧ ಹೊಂದಿಲ್ಲ. 10 ವರ್ಷದಿಂದ ಮಾತನಾಡ್ತಿಲ್ಲ. ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡ್ತೇನೆಂದು ಶ್ರೀನಿವಾಸಮೂರ್ತಿ ಹೇಳಿದ್ದಾರೆ. ಅನೇಕ ವರ್ಷಗಳಿಂದ ಬಾಳಿ-ಬದುಕಿದ್ದ ಮನೆ ಸುಟ್ಟು ಭಸ್ಮವಾಗಿದೆ. ಸಹೋದರರ ಮನೆಗೂ ಬೆಂಕಿ ಹಚ್ಚಿದ್ದಾರೆ. ಎಲ್ಲರೂ ಬೀದಿಪಾಲಾಗಿದ್ದೇವೆಂದು ಶ್ರೀನಿವಾಸಮೂರ್ತಿ ಕಣ್ಣೀರಿಟ್ಟಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಗಲಾಟೆ ಸೂಕ್ತವಲ್ಲ. ಸರ್ಕಾರ ಶ್ರೀನಿವಾಸಮೂರ್ತಿ ಹಾಗೂ ಅವ್ರ ಕುಟುಂಬಕ್ಕೆ ರಕ್ಷಣೆ ನೀಡ್ತೇವೆ ಎಂದಿದ್ದಾರೆ. ಹಾಗೆ ಸಿಎಂ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಗಲಾಟೆ ಮಾಡಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ. ಹಾಗೆ ಬೇಗ ಪರಿಸ್ಥಿತಿ ನಿಯಂತ್ರಣಕ್ಕೆ ತಂದ ಬೆಂಗಳೂರು ಪೊಲೀಸರಿಗೆ ಆರ್. ಅಶೋಕ್ ಅಭಿನಂದನೆ ಹೇಳಿದ್ದಾರೆ.