ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಲು ಸರ್ಕಾರದ ವೈಫಲ್ಯವೇ ಕಾರಣ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ತಜ್ಞರ ಪ್ರಕಾರ ಸೋಂಕಿತರನ್ನು 98% ಕಾಪಾಡುವ ಸಾಧ್ಯತೆ ಇದೆ. ಆದರೆ ಬೇಜವಾಬ್ದಾರಿ ಕೊಲೆಗಡುಕ ಸರ್ಕಾರದಿಂದ ಸಾವು ಹೆಚ್ಚಿದೆ. ಆಕ್ಸಿಜನ್ ಇಲ್ಲದೆ, ಬೆಡ್ ಸಿಗದೆ, ವೆಂಟಿಲೇಟರ್, ಚಿಕಿತ್ಸೆ ಸಿಗದೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇದು ಸರ್ಕಾರದ ವೈಫಲ್ಯವಲ್ಲದೇ ಬೇರೇನು ಎಂದು ಕಿಡಿಕಾರಿದೆ.
ʼಕೊರೊನಾʼ ಲಸಿಕೆ ಕುರಿತು ನಿಮಗೆ ತಿಳಿದಿರಲಿ ಈ ಮುಖ್ಯ ಮಾಹಿತಿ
ಯಾವ ದಿನಾಂಕದಿಂದ ಲಸಿಕೆ ಹಂಚಿಕೆ ಮಾಡುತ್ತಾರೆ? ಲಸಿಕೆ ಕೊರತೆಯನ್ನು ನಿಭಾಯಿಸಲು ಯಾವ ಯೋಜನೆ ಇದೆ? ರಾಜ್ಯದಲ್ಲಿ ಸರ್ವರಿಗೂ ಲಸಿಕೆ ನೀಡಲು ನಿಮಗೆ ಎಷ್ಟು ಕಾಲಾವಧಿ ಬೇಕಾಗಬಹುದು? ಲಸಿಕೆ ನೀಡಿಕೆಯ ಬಗ್ಗೆ ಸರ್ಕಾರದ ಮುಂದೆ ಇರುವ ಕಾರ್ಯತಂತ್ರಗಳಾದರೂ ಏನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ವಾಸ್ತವವಾಗಿ ರಾಜ್ಯಕ್ಕೆ ಲಸಿಕೆ ಯಾವಾಗ ಬರಲಿದೆ? ಕಂಪನಿಗಳು ನಿಡುವ ಭರವಸೆ ಇದೆಯೇ ಅಥವಾ ಕೇಂದ್ರ ಸರ್ಕಾರ ಕೊಡುತ್ತದೆಯೇ ಎಂಬುದೇ ಆರೋಗ್ಯ ಸಚಿವರಿಗೆ ಗೊತ್ತಿದ್ದಂತಿಲ್ಲ. ಹೀಗಿದ್ದರೂ ಲಸಿಕೆ, ರೆಮ್ ಡಿಸಿವಿರ್ ಕೊರತೆಯಿಲ್ಲ, ಆಕ್ಸಿಜನ್ ಬೇಕಾದಷ್ಟಿದೆ, ಬೆಡ್ ಗಳು ಸಾಕಷ್ಟಿವೆ ಎಂಬ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜನ ಸಾಯುತ್ತಿದ್ದಾರೆ, ಆದರೂ ಬಿಜೆಪಿ ಸುಳ್ಳು ಮುಂದುವರೆಯುತ್ತಲೇ ಇದೆ. ಮಾತಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಇಲ್ಲದೆ ಅಧ್ವಾನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.