ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಮೀನನ್ನು ತಿನ್ನುವಾಗ ಬಲು ಎಚ್ಚರಿಕೆಯಿಂದ ಇರುವುದು ಒಳಿತು. ಅದರಲ್ಲಿರುವ ಮುಳ್ಳನ್ನು ಬಿಡಿಸಿಕೊಂಡು ತಿನ್ನುವುದು ಬಹುಮುಖ್ಯ. ಮೀನು ತಿನ್ನುವಾಗ ಗಂಟಲಲ್ಲಿ ಮುಳ್ಳು ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ವರದಿ ಇಲ್ಲಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೇದಾವತಿ ಎಂಬ 38 ವರ್ಷದ ಮಹಿಳೆ ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡ ವೇಳೆ ನೋವು ಹಾಗೂ ಭಯದಿಂದ ಮೃತಪಟ್ಟಿದ್ದಾರೆ.
ಮಹಿಳೆ ಇತ್ತೀಚೆಗೆ ಪ್ರವಾಸಕ್ಕೆ ಹೋಗಿ ಬಂದ ಬಳಿಕ ಜ್ವರ ಕಾಣಿಸಿಕೊಂಡಿತ್ತೆಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ವೇದಾವತಿ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ವರದಿ ನೆಗೆಟಿವ್ ಬಂದಿದ್ದು, ಮನೆಗೆ ತೆರಳಿದ್ದ ಅವರು, ಪತಿ ಮೀನು ತಂದ ವೇಳೆ ಅಡುಗೆ ಮಾಡಿ ಕುಟುಂಬದೊಂದಿಗೆ ಊಟಕ್ಕೆ ಕುಳಿತಿದ್ದಾರೆ.
ಈ ಸಂದರ್ಭ ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡಿದ್ದು, ನೋವಿನಿಂದ ನರಳಿದ್ದಾರೆ. ಬಳಿಕ ವಾಂತಿ ಮಾಡಿಕೊಂಡರೂ ಸಹ ಮುಳ್ಳು ಹೊರಬಂದಿಲ್ಲ. ಇದರಿಂದ ತೀವ್ರವಾಗಿ ಆತಂಕ ಹಾಗೂ ಭಯಗೊಂಡ ಅವರನ್ನು ಕುಟುಂಬಸ್ಥರು ಸಾಗರ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.