ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಮಹಿಳಾ ಸದಸ್ಯೆಯರನ್ನು ಎಳೆದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್ಐಆರ್ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಾಗಲಕೋಟೆ ಎಸ್ ಪಿ ಲೋಕೇಶ್ ಭರವಸೆ ನೀಡಿದ್ದಾರೆ.
ಮಹಾಲಿಂಗಪುರ ಪುರಸಭೆ ಸದಸ್ಯೆಯರನ್ನು ಬಿಜೆಪಿ ಶಾಸಕ ಸಿದ್ದು ಸವದಿ ಸೇರಿದಂತೆ ಹಲವರು ಎಳೆದಾಡಿದ ವಿಡಿಯೋ ವೈರಲ್ ಆಗಿದ್ದು, ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ಸದಸ್ಯೆಯರಾದ ಚಾಂದಿನಿ ಹಾಗೂ ಸುಜಾತಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಹಾಲಿಂಗಪುರ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಿಸಲಾಗಿದೆ. ಸೆಕ್ಷನ್ 323, 331, 334 ಅಡಿ ಪ್ರಕರಣ ದಾಖಲಾಗಿದೆ. ಆದರೆ ಎಫ್ಐಆರ್ ನಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನೂ ನಮೂದಿಸದಿರುವುದು ಅಚ್ಚರಿಗೆ ಕಾರಣವಾಗಿದೆ.
ಇನ್ನೊಂದೆಡೆ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯೆಯರು ಶಾಸಕ ಸಿದ್ದು ಸವದಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಎಸ್ ಪಿಗೆ ಮನವಿ ಮಾಡಿದ್ದಾರೆ.