ಯಾದಗಿರಿ: ರಾಜ್ಯದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮುಂದುವರೆಸಿದ್ದು, ಕೊರೊನಾ ವಾರಿಯರ್ ಗಳನ್ನೇ ಬಲಿ ಪಡೆಯುತ್ತಿದೆ. ಇದೀಗ ಯಾದಗಿರಿ ಜಿಲ್ಲೆಯಲ್ಲಿ ನರ್ಸ್ ಒಬ್ಬರು ಕೊರೊನಾ ಸೋಂಕಿನಿಂದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
34 ವರ್ಷದ ಗೀತಾ ಮೃತ ಕೊರೊನಾ ವಾರಿಯರ್. ಗೀತಾ ಯಾದಗಿರಿಯ ಕೌಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ವರ್ಷಗಳಿಂದ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಸೆ.19ರಂದು ಗೀತಾ ಅವರಿಗೆ ಕೊವಿಡ್ ಸೋಂಕು ದೃಢಪಟ್ಟಿತ್ತು. ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಗೀತಾ ಅವರಿಗೆ ಸೆ.29ರಂದು ಕೊವಿಡ್ ಟೆಸ್ಟ್ ಮಾಡಿಸಿದಾಗ ಮತ್ತೆ ಪಾಸಿಟಿವ್ ಬಂದಿತ್ತು. ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ ನರ್ಸ್ ಗೀತಾ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸ್ಟಾಪ್ ನರ್ಸ್ ಗೀತಾ ಕೊವಿಡ್ ಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ ಸೂಚಿಸಿದ್ದು, ಕೌಳೂರು ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಆಗಿದ್ದ ಗೀತಾ, ಪ್ರಾಣದ ಹಂಗು ತೊರೆದು ಕೊರೊನಾ ಸೋಂಕಿತರ ಚಿಕಿತ್ಸೆ ಮಾಡಿದ್ದರು. ಇದೀಗ ಕೊರೊನಾ ಸೋಂಕಿನಿಂದ ಅವರು ಮೃತಪಟ್ಟಿದ್ದು, ಅವರ ಆತ್ಮಕ್ಕೆ ಶಾಂತಿ ಕೋರುವುದಾಗಿ, ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.