ಬೆಂಗಳೂರು: ಸಿಡಿ ಪ್ರಕರಣದ ಮಹಾನಾಯಕ ಎಂದೇ ಆರೋಪಿಸಲಾಗುತ್ತಿರುವ ಡಿ.ಕೆ. ಶಿವಕುಮಾರ್ ವಿರುದ್ಧ ಬಹಿರಂಗ ಸವಾಲು ಹಾಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿಕೆಶಿ ಬೆಳಗಾವಿಗೆ ಬಂದರೆ ಸ್ವಾಗತಿಸುತ್ತೇವೆ. ಅವರನ್ನು ಮರ್ಯಾದೆಯಿಂದ ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ. ಆದರೆ ಕನಕಪುರದಲ್ಲಿ ಮಾತ್ರ ಡಿಕೆಶಿ ವಿರುದ್ಧ ನೇರವಾಗಿ ಹೋರಾಡುತ್ತೇವೆ. ಕನಕಪುರದಲ್ಲಿ ಮಾತ್ರ ಅವರನ್ನು ಸೋಲಿಸದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕೊಹೊಳಿ, ಸಿಡಿ ಪ್ರಕರಣದಲ್ಲಿ ನಾನು ನಿರಪರಾಧಿ ಎಂಬುದನ್ನು ಯುವತಿ ಪೋಷಕರೇ ಹೇಳಿದ್ದಾರೆ. ಯುವತಿ ಪೋಷಕರಿಗೆ ಧನ್ಯವಾದ. ಮಹಾನಾಯಕನ ಷಡ್ಯಂತ್ರಕ್ಕೆ ಮಾಫಿ ಎಂಬುದೇ ಇಲ್ಲ. ಮಹಾನಾಯಕ ರಾಜಕೀಯದಲ್ಲಿರಲು ಅರ್ಹರೇ ಅಲ್ಲ. ಎಲ್ಲಾ ಪಕ್ಷದ ಮುಖಂಡರಲ್ಲೂ ವಿನಂತಿ ಮಾಡುತ್ತೇನೆ. ಡಿ.ಕೆ. ಶಿವಕುಮಾರ್ ರಾಜಕೀಯ ನಿವೃತ್ತಿ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಡಿಕೆಶಿಯಿಂದ ಹೊಲಸು ರಾಜಕೀಯ: ನಮ್ಮ ಮಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ರಾಜಕಾರಣ – ಸಿಡಿ ಲೇಡಿ ಪೋಷಕರ ಆರೋಪ
ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ನೇರ ಹೋರಾಟ ಮಾಡುತ್ತೇನೆ. ಬೆಳಗಾವಿಯಲ್ಲಿ ನನ್ನ ಸಹೋದರನನ್ನು ನಿಲ್ಲಿಸುತ್ತೇನೆ. ಆದರೆ ಕನಕಪುರದಲ್ಲಿ ಡಿಕೆಶಿ ವಿರುದ್ಧ ಸ್ಪರ್ಧಿಸಿ ಗೆಲ್ಲುತ್ತೇವೆ. ಡಿಕೆಶಿ ವಿರುದ್ಧ ಯಾರೇ ಸ್ಪರ್ಧಿಸಲಿ, ಒಂದು ವೇಳೆ ಕುಮಾರಸ್ವಾಮಿ ಸ್ಪರ್ಧಿಸಿದರೂ ಅವರಿಗೂ ಬೆಂಬಲ ನೀಡಲು ಸಿದ್ಧ. ಆದರೆ ಡಿಕೆಶಿಯನ್ನು ಸೋಲಿಸದೇ ಬಿಡಲ್ಲ ಎಂದು ಪಣತೊಟ್ಟಿದ್ದಾರೆ. ಮಹಾನಾಯಕನ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸುವುದಾಗಿ ಗುಡುಗಿದ್ದಾರೆ.