ಕಲಬುರಗಿ: ಭಾರಿ ಮಳೆಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಗೆ ಭೇಟಿ ನೀಡಿರುವ ಕಂದಾಯ ಸಚಿವ ಆರ್. ಅಶೋಕ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೇವಲ ಹತ್ತು ನಿಮಿಷದಲ್ಲಿ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿ ವಾಪಸ್ ಆಗಿದ್ದಾರೆ.
ಮಳೆಯಿಂದಾಗಿ ಜಿಲ್ಲೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. 30ಕ್ಕೂ ಹೆಚ್ಚು ಗ್ರಾಮಗಳು ನೀರಿನಲ್ಲಿ ಮುಳುಗಿದ್ದು, ಕೃಷಿ ಭೂಮಿ, ರಸ್ತೆ, ಸೇತುವೆಗಳು ಜಲಾವೃತಗೊಂಡಿವೆ.
ಮಳೆ ಹಾನಿ, ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಸೈಯದ್ ಚಿಂಚೋಳಿ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ್, ಕಾಟಾಚಾರಕ್ಕೆ ಸಂತ್ರಸ್ತರ ಸಂಕಷ್ಟ ಆಲಿಸಿ ಹೊರಟಿದ್ದಾರೆ ಎನ್ನಲಾಗಿದೆ.
ಮಳೆಯಿಂದಾಗಿ ಮನೆ ಮಠ ಕಳೆದುಕೊಂಡಿರುವ ಗ್ರಾಮಸ್ಥರು, ತಮ್ಮನ್ನು ಸ್ಥಳಾಂತರ ಮಾಡುವಂತೆ ಸಚಿವರ ಬಳಿ ಅಳಲು ತೋಡಿಕೊಂದಿದ್ದಾರೆ. ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಬೇಕಿದ್ದ ಕಂದಾಯ ಸಚಿವರು ಹತ್ತೇ ನಿಮಿಷದಲ್ಲಿ ಹಿಂದಿರುಗಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.