ಮರಾಠ ಪ್ರಾಧಿಕಾರ ರಚನೆಯಾದಾಗಿನಿಂದಲೂ ವಿರೋಧದ ಕೂಗು ಹೆಚ್ಚಾಗುತ್ತಲೇ ಇದೆ. ಇದನ್ನು ವಿರೋಧಿಸಿ ಈಗಾಗಲೇ ಕರ್ನಾಟಕ ಬಂದ್‌ಗೆ ವಾಟಾಳ್ ಪಕ್ಷ ಕರೆಯನ್ನೂ ನೀಡಿದೆ. ಇದೆಲ್ಲದರ ಮಧ್ಯೆ ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಮಾಡಿ ಸರ್ಕಾರ ಮತ್ತೊಂದು ಎಡವಟ್ಟು ಮಾಡಿಕೊಳ್ತಾ ಎಂಬ ಪ್ರಶ್ನೆ ಆರಂಭವಾಗಿದೆ.
ಹೌದು, ಅತ್ತ ಮರಾಠ ಪ್ರಾಧಿಕಾರ ರಚನೆ ಆಗಿ ಹಣ ಬಿಡುಗಡೆಯಾದ ಬೆನ್ನಲ್ಲೇ ವಿರೋಧಗಳು ಹೆಚ್ಚಾದವು. ಕನ್ನಡಕ್ಕೆ ಅಪಮಾನ ಮಾಡಲಾಗಿದೆ ಎಂದು ಕನ್ನಡ ಪರ ಹೋರಾಟಗಾರರು ರಸ್ತೆಗಿಳಿದಿದ್ದಾರೆ.
ಯಾವುದೇ ತಯಾರಿ ಇಲ್ಲದೆ ತರಾತುರಿಯಲ್ಲಿ ಬಿಎಸ್‌ವೈ ಇಂತಹ ನಿರ್ಧಾರಕ್ಕೆ ಕೈ ಹಾಕಿದ್ದು ಇದೀಗ ದೊಡ್ಡ ಯಡವಟ್ಟಾಯ್ತಾ ಎಂಬ ಚರ್ಚೆ ಎದ್ದಿದೆ. ಅದು ಚುನಾವಣೆ ಹೊಸ್ತಿಲಲ್ಲಿ ಸಮುದಾಯದ ಓಲೈಕೆಗಾಗಿ ಈ ರೀತಿ ಮಾಡಿದ್ದಾರೆ ಎಂಬುದು ಅನೇಕರ ಮಾತಾದರೂ ಮೇಲ್ನೋಟಕ್ಕೆ ಇದು ಸತ್ಯ ಎನಿಸುವಂತಿದೆ.
ಇತ್ತ ವೀರಶೈವ ಲಿಂಗಾಯತ ಪ್ರಾಧಿಕಾರ ಮಾಡಿ ಮತ್ತೊಂದು ಎಡವಟ್ಟು ಮಾಡಿಕೊಂಡಿತಾ ಸರ್ಕಾರ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಈ ಪ್ರಾಧಿಕಾರ ಆದ ಬೆನ್ನಲ್ಲೇ ಇತರ ಸಮುದಾಯದವರು ಕೂಡ ನಮ್ಮ ಜನಾಂಗಕ್ಕೂ ಪ್ರಾಧಿಕಾರ ಮಾಡಿ ಎಂದು ಸಿಎಂ ಅವರನ್ನು ಬೆನ್ನು ಬಿದ್ದಿದ್ದಾರೆ.
ನಿನ್ನೆಯೂ ಒಕ್ಕಲಿಗ ಶಾಸಕರು ಸಿಎಂಗೆ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ ಮಾಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಅನೇಕರು ಪ್ರಾಧಿಕಾರದ ಅವಶ್ಯಕತೆ ಏನಿತ್ತು ಎಂಬ ಮಾತುಗಳನ್ನಾಡುತ್ತಿದ್ದಾರೆ. ಒಟ್ನಲ್ಲಿ ಮರಾಠ ಪ್ರಾಧಿಕಾರ ಮಾಡಿದ್ದಕ್ಕೆ ಕನ್ನಡಿಗರು ರೊಚ್ಚಿಗೆದ್ದರೆ, ಅತ್ತ ವೀರಶೈವ ಲಿಂಗಾಯತ ಪ್ರಾಧಿಕಾರದಿಂದಲೂ ಬೇರೆ ಸಮುದಾಯದ ಜನರೂ ನಮಗೂ ಪ್ರಾಧಿಕಾರ ಬೇಕು ಎಂದು ಕೇಳುವಂತಾಗಿದೆ.