ಕೊರೊನಾದ ಕಾರಣದಿಂದ ಮಕ್ಕಳಿಗೆ ಈಗ ಸದ್ಯಕ್ಕಂತೂ ಶಾಲೆಯಿಲ್ಲ. ಮನೆಯಲ್ಲಿದ್ದು ಏನಾದರೂ ತರಲೆ ಮಾಡುತ್ತಾ ಇರುತ್ತಾರೆ. ಈಗ ಹೊರಗಡೆ ಯಾವುದಾದರೂ ಕ್ಲಾಸಿಗೆ ಕಳುಹಿಸುವುದಕ್ಕೂ ಸಾಧ್ಯವಿಲ್ಲ. ಮಕ್ಕಳ ಕಾಟ ತಡೆಯೋದಕ್ಕೆ ಆಗುವುದಿಲ್ಲ ಎಂದು ಪೋಷಕರು ಟಿವಿ ಹಾಕಿಕೊಡುವುದು ಅಥವಾ ಮೊಬೈಲ್ ಕೈಗೆ ಕೊಟ್ಟುಬಿಡುವುದು ಮಾಡುತ್ತಾರೆ. ಇದರಿಂದ ಮಕ್ಕಳ ಕಣ್ಣಿಗೂ ತೊಂದರೆ ಹಾಗೇ ಓದಿನ ಕುರಿತು ಅವರ ಆಸಕ್ತಿ ಕೂಡ ಕಡಿಮೆಯಾಗುತ್ತದೆ.
ಹೊರಗಡೆ ಹೋಗಿ ಆಡುವುದಕ್ಕೆ ಈಗ ಆಗಲ್ಲ. ಹಾಗಾಗಿ ಮನೆಯಲ್ಲಿ ಕುಳಿತು ಆಡುವಂತಹ ಅಳಿಗುಳಿ ಮನೆ ಆಟ, ಲೂಡೋ, ಚೆಸ್ ಗಳನ್ನು ಹೇಳಿಕೊಡಿ. ಇದರ ಜತೆಗೆ ಗಿಡ ನೆಡುವುದು, ಅವರ ಬಟ್ಟೆಗಳನ್ನು ಅವರೇ ಮಡಚಿಕೊಳ್ಳುವುದು ಇಂತಹ ಕೆಲಸವನ್ನು ಅವರಿಗೆ ಪ್ರೀತಿಯಿಂದ ಹೇಳಿಕೊಡಿ. ಇದರಿಂದ ಮಕ್ಕಳಿಗೂ ಖುಷಿಯಾಗುತ್ತದೆ.
ಇನ್ನು ಪುಸ್ತಕಗಳ ಕುರಿತು ಅವರಿಗೆ ಆಸಕ್ತಿ ಬೆಳೆಸಿ. ಕತೆ ಪುಸ್ತಕಗಳನ್ನು ಅವರಿಗೆ ತಂದುಕೊಡಿ. ಇದರಿಂದ ಅವರ ಜ್ಞಾನವೂ ಹೆಚ್ಚುತ್ತದೆ.
ಮಕ್ಕಳ ಮುಂದೆ ಇನ್ನೊಬ್ಬರ ಕುರಿತು ಬೈಯುವುದಾಗಲಿ. ತೆಗಳುವುದಾಗಲಿ ಮಾಡಬೇಡಿ. ಹಾಗೇ ನಿಮ್ಮ ಮಗುವನ್ನು ಇನ್ನೊಂದು ಮಗುವಿನ ಜತೆಗೆ ಹೋಲಿಕೆ ಮಾಡಬೇಡಿ. ಇದರಿಂದ ಮಕ್ಕಳಲ್ಲಿ ಕೀಳರಿಮೆ ಬೆಳೆಯುತ್ತದೆ. ಆದಷ್ಟೂ ಅವರಲ್ಲಿ ಆತ್ಮವಿಶ್ವಾಸ ತುಂಬಿ.