ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಮದ್ಯದಂಗಡಿಗಳು ಬಂದ್ ಆಗಿದ್ದ ಪರಿಣಾಮ ಮದ್ಯ ಪ್ರಿಯರು ತತ್ತರಿಸಿ ಹೋಗಿದ್ದರು. ಲಾಕ್ಡೌನ್ ಸಡಿಲಿಕೆ ಬಳಿಕ ಮದ್ಯ ಮಾರಾಟ ಆರಂಭವಾಗಿದ್ದರೂ ಸಹ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಾಗಿ ಇದು ಮದ್ಯ ಪ್ರಿಯರ ನಿರಾಸೆಗೆ ಕಾರಣವಾಗಿತ್ತು.
ಇದೀಗ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ್ದು, ಮುಂದಿನ ವಾರದಿಂದ ಕ್ಲಬ್, ಪಬ್ ಹಾಗೂ ಬಾರ್ ಗಳು ಈ ಹಿಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಸ್ವತಃ ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ.
ಲಾಕ್ ಡೌನ್ ವೇಳೆ ಮದ್ಯ ಮಾರಾಟ ಸ್ಥಗಿತಗೊಂಡಿದ್ದರಿಂದ ಅಬಕಾರಿ ಇಲಾಖೆ ಸಾಕಷ್ಟು ನಷ್ಟ ಅನುಭವಿಸಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೂ ಆದಾಯ ಕಡಿಮೆಯಾಗಿತ್ತು. ಇದೀಗ ಮದ್ಯ ಮಾರಾಟ ಆರಂಭವಾದ ಬಳಿಕ ನಷ್ಟ ಎರಡು ಸಾವಿರ ಕೋಟಿ ರೂಪಾಯಿಗೆ ಬಂದು ನಿಂತಿದೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಲಾಕ್ ಡೌನ್ ಪೂರ್ವದಲ್ಲಿದ್ದಂತೆ ಮದ್ಯ ಮಾರಾಟ ಆರಂಭವಾದರೆ ಎಂಟು ತಿಂಗಳಲ್ಲಿ ನಷ್ಟ ಸರಿದೂಗಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.