ಬೆಂಗಳೂರು: ಮಗಳು ನ್ಯಾಯಾಲದ ಮುಂದೆ ಹಾಜರಾಗಿ ಹೇಳಿಕೆ ನೀಡುವುದು ಖಚಿತವಾಗುತ್ತಿದ್ದಂತೆ ಸಿಡಿ ಯುವತಿ ಪೋಷಕರು ದಿಢೀರ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಕಿಡಿಕಾರಿರುವ ಕಾಂಗ್ರೆಸ್, ಬಿಜಾಪುರದ ಯುವತಿ ಪೋಷಕರು ಬೆಳಗಾವಿಯಲ್ಲಿ ಏಕಿದ್ದಾರೆ? ಮಗಳ ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಇದು ಪೋಷಕರು ಆರೋಪಿಯ ಕಸ್ಟಡಿಯಲ್ಲಿರುವುದು ಸ್ಪಷ್ಟಗೊಳಿಸುತ್ತಿದೆ ಎಂದಿದೆ.
ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಯುವತಿ ಪೋಷಕರು ಯಾರ ಗನ್ ಪಾಯಿಂಟ್ನಲ್ಲಿದ್ದಾರೆ? ಯಾರ ಬೆದರಿಕೆಯಲ್ಲಿ ಮಾತಾಡುತ್ತಿದ್ದಾರೆ? ಯಾರು ಬರೆದುಕೊಟ್ಟ ಸ್ಕ್ರಿಪ್ಟ್ನ್ನು ಹೆದರಿಕೆಯಲ್ಲಿ ಓದುತ್ತಿದ್ದಾರೆ? ಮಗಳ ಹೇಳಿಕೆಗೆ ವಿರುದ್ಧವಾಗಿ ಏಕೆ ಮಾತಾಡುತ್ತಿದ್ದಾರೆ? ಇದು ಪೋಷಕರು ಆರೋಪಿಯ ಕಸ್ಟಡಿಯಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದೆ.
ಯುವತಿ ಪೋಷಕರ ದಿಢೀರ್ ಸುದ್ದಿಗೋಷ್ಠಿ: ನನ್ನ ಮಗಳು ಒತ್ತಡದಲ್ಲಿದ್ದಾಳೆ – ಆಕೆ ನೀಡುವ ಹೇಳಿಕೆ ಪರಿಗಣಿಸಬಾರದು ಎಂದ ತಂದೆ
ಯುವತಿ ಎಸ್ ಐ ಟಿ ಆರೋಪಿಯನ್ನು ರಕ್ಷಿಸುತ್ತಿದೆ. ಪೋಷಕರಿಗೆ ಬೆದರಿಕೆಯೊಡ್ಡಿ ಹೇಳಿಕೆ ಕೊಡಿಸಲಾಗುತ್ತಿದೆ. ಪೋಷಕರಿಗೆ ನಡೆದ ವಿಷಯದ ಬಗ್ಗೆ ತಿಳಿದಿಲ್ಲ. ನನಗೆ ರಕ್ಷಣೆ ಸಿಗುವ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿಕೆಗಳನ್ನು ನಿಡಿದ್ದಾಳೆ. ವಿಷಯಾಂತರ ನಿಮ್ಮ ರೂಢಿಗತ ಕಲೆ, ಅದನ್ನು ಬಿಟ್ಟು ಮಾತಾಡಿ ಇದರ ಬಗ್ಗೆ ಬಿಜೆಪಿ ನಾಯಕರೇ ಉತ್ತರ ಕೊಡಬೇಕು ಎಂದು ಆಗ್ರಹಿಸಿದೆ.
ಕಳೆದ 27 ದಿನಗಳಿಂದ ಸಿಡಿ ಪ್ರಕರಣದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಆರೋಪಿಗೆ ಸಂಪೂರ್ಣ ರಕ್ಷಣೆ ನೀಡುತ್ತಿರುವುದು ಸ್ಪಷ್ಟವಾಗುತ್ತಿದೆ. ಸರ್ಕಾರ ರಾಜ್ಯದ ಜನರ ಋಣದಲ್ಲಿದೆಯೋ? ಅತ್ಯಾಚಾರ ಆರೋಪಿ ಋಣದಲ್ಲಿದೆಯೋ? ಈ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ಸರ್ಕಾರಕ್ಕಿದೆಯೇ? ಫ್ರೇಮ್ ವರ್ಕ್ ಇಲ್ಲದಿರೋ ಎಸ್ ಐ ಟಿ ರಚನೆ ಸಂತ್ರಸ್ತೆಗೆ ನ್ಯಾಯ ಒದಗಿಸುವುದಕ್ಕೋ ಅಥವಾ ಅತ್ಯಾಚಾರಿ ರಕ್ಷಣೆಗೋ? ಎಂದು ಪ್ರಶ್ನಿಸಿದೆ.