ಬೆಂಗಳೂರು: ಶಾಲಾ ಶುಲ್ಕ ಪಾವತಿ ವಿಚಾರವಾಗಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ಅದನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಲಿಸುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಪೋಷಕರಿಗೂ ಶುಲ್ಕ ಪಾವತಿ ಕಷ್ಟವಾಗಿದೆ. ಇದರಿಂದ ಖಾಸಗಿ ಶಾಲೆಗಳೂ ತೊಂದರೆಗೀಡಾಗಿವೆ. ಇದನ್ನು ಗಮನಿಸಿ ಸರ್ಕಾರ ಕಳೆದ ವರ್ಷದ ಬೋಧನಾ ಶುಲ್ಕದ ಶೇ. 30ರಷ್ಟು ಪಾವತಿಸಲು ಸೂಚಿಸಿ ಆದೇಶ ಹೊರಡಿಸಿತ್ತು. ಆದರೆ ಶೇ.30 ಬೋಧನಾ ಶುಲ್ಕ ಪಾವತಿ ಆದೇಶವನ್ನು ಬಹುತೇಕ ಖಾಸಗಿ ಶಾಲಾ ಸಂಘಟನೆಗಳು ಸ್ವಾಗತಿಸಿದರೆ, ಕೆಲ ಖಾಸಗಿ ಶಾಲಾ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಹತ್ತಾರು ಬಾರಿ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ಈ ವರ್ಷದ ಮಟ್ಟಿಗೆ ಶೇ. 30 ಶುಲ್ಕ ಪಾವತಿ ಕುರಿತು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡಿದರೂ ನಿಭಾಯಿಸುತ್ತೇನೆ ಎಂದ ಶಾಸಕ ಸೋಮಶೇಖರ್ ರೆಡ್ಡಿ
ಸರ್ಕಾರದ ಆದೇಶದಂತೆ ಪೋಷಕರು ಶುಲ್ಕ ಪಾವತಿಸಲು ಮುಂದಾಗಿದ್ದಾರೆ. ಇದರಿಂದ ಅನೇಕ ಶಾಲೆಗಳು ಆಯಾ ಶಾಲೆಗಳ ಸಿಬ್ಬಂದಿಯ ವೇತನ ಪಾವತಿಸಲು ಅನುಕೂಲವಾಗಿರುವುದಂತೂ ನಿಜ. ಸರ್ಕಾರ ಈ ಆದೇಶ ಹೊರಡಿಸಿದ್ದರ ಪರಿಣಾಮ ಪ್ರಸ್ತುತ ಶಾಲೆಗಳಲ್ಲಿ ಶುಲ್ಕ ಸಂಗ್ರಹವಾಗುತ್ತಿದೆ. ಇಲ್ಲದೇ ಹೋಗಿದ್ದರೆ ಇದು ಇನ್ನೂ ಬಿಗಡಾಯಿಸುತಿತ್ತು. ನಮ್ಮ ಶಾಲೆಗಳು ಇದನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು.
ಈ ಸಮಸ್ಯೆಯನ್ನು ಯಾವ ರೀತಿ ಪರಿಹರಿಸಬೇಕೆಂದು ಯಾರಾದರೂ ನನಗೆ ಸಲಹೆ ನೀಡಿದರೆ ನಾನಂತೂ ಮುಕ್ತವಾಗಿ ಸ್ವೀಕರಿಸುತ್ತೇನೆ. ಇದನ್ನು ನಾವು ಮಾತುಕತೆಯಿಂದಲೇ ಬಗೆಹರಿಸಿಕೊಳ್ಳಬೇಕು. ಇಂತಹ ವಿಚಿತ್ರ ಸನ್ನಿವೇಶದಲ್ಲಿ ನಾವು ನೀವೆಲ್ಲರೂ ಪೋಷಕರನ್ನೂ ಒಳಗೊಂಡು ಕುಳಿತು ಚರ್ಚೆ ಮಾಡೋಣ. ಈ ವಿಚಿತ್ರ ಸನ್ನಿವೇಶದಲ್ಲಿ ಈ ವರ್ಷದ ಮಟ್ಟಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ನಮ್ಮ ಮಕ್ಕಳ ಭವಿಷ್ಯವನ್ನು ಕಾಯಲು ನಾವೆಲ್ಲ ಮುಂದಾಗಬೇಕು ಎಂದು ಸಚಿವರು ಪೋಷಕರು ಮತ್ತು ಶಾಲಾಡಳಿತ ಮಂಡಳಿಗಳಿಗೆ ಮನವಿ ಮಾಡಿದ್ದಾರೆ.