ಹುಬ್ಬಳ್ಳಿ: ಕೊರೊನಾ ಮಹಾಮಾರಿ ಕೆಲ ರಾಷ್ಟ್ರಗಳಲ್ಲಿ ಮತ್ತೆ ಹೆಚ್ಚುತ್ತಿದ್ದು, 2ನೇ ಹಂತದ ಅಲೆ ಆರಂಭವಾಗಿದೆ. ಹೀಗಾಗಿ ವಿವಿಧ ದೇಶಗಳಲ್ಲಿ 2ನೇ ಹಂತದ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಕೂಡ ಮತ್ತೆ ಲಾಕ್ ಡೌನ್ ಆರಂಭವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಪಷ್ಟಪಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಭಾರತದಲ್ಲಿ ಮತ್ತೆ ಲಾಕ್ ಡೌನ್ ಪ್ರಸ್ತಾಪವಿಲ್ಲ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಫ್ರಾನ್ಸ್ ಹಾಗೂ ಜರ್ಮನಿಯಲ್ಲಿ 2ನೇ ಹಂತದ ಕೊರೊನಾ ಅಟ್ಟಹಾಸ ಆರಂಭವಾಗಿರುವುದರಿಂದ ಎರಡೂ ರಾಷ್ಟ್ರಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಿದೆ. ಮುಂದಿನ ಮೂರು ತಿಂಗಳು ಚಳಿಗಾಲವಿರುವುದರಿಂದ ಭಾರತದಲ್ಲೂ ಕೊರೊನಾ ಸಂಖ್ಯೆ ಹೆಚ್ಚುವ ಭೀತಿಯಿದೆ. ಹೀಗಾಗಿ ಭಾರತದಲ್ಲಿ ಮತ್ತೆ ಲಾಕ್ ಡೌನ್ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿತ್ತು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಭಾರತದಲ್ಲಿ ಕೊರೊನಾ ಹರಡುವಿಕೆ ಕಡಿಮೆಯಾಗುತ್ತಿದೆ. ಇಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಅಗತ್ಯವಿಲ್ಲ. ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು, ಸಿದ್ಧತೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.