ಮಂಗಳೂರು: ಮಲೈಕಾ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ವಿರುದ್ಧ ಸುಮಾರು 350 ಕೋಟಿ ರೂಪಾಯಿಗೂ ಅಧಿಕ ವಂಚನೆ ಆರೋಪ ಕೇಳಿಬಂದಿದ್ದು, ಬಡ್ಡಿ ಹಣ ನೀಡದೇ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಂಗಳೂರು, ಮುಂಬೈ ಸೇರಿದಂತೆ ಹಲವೆಡೆಗಳಲ್ಲಿ ಶಾಖೆಗಳನ್ನು ತೆರೆದಿದ್ದ ಮಲೈಕಾ ಮಲ್ಟಿ ಸ್ಟೇಟ್ ಸೊಸೈಟಿ ತಿಂಗಳ ಇಂಟ್ರೆಸ್ಟ್ ಸ್ಕೀಂ ನಲ್ಲಿ ಹಣವಿಡಲು ಹೇಳಿ ಗ್ರಾಹಕರಿಗೆ ವಂಚಿಸಿದೆ. ಮಂಗಳೂರು ಶಾಖೆಯೊಂದರಲ್ಲೇ 40 ಕೋಟಿಗೂ ಹೆಚ್ಚು ವಂಚನೆ ನಡೆದಿದೆ. ಇದೀಗ ಸಂಸ್ಥೆಯ ಎಲ್ಲಾ ಶಾಖೆಗಳನ್ನು ಬಂದ್ ಮಾಡುವ ಮೂಲಕ ಗ್ರಾಹಕರಿಗೆ ಹಣ ನೀಡದೇ ಮೋಸ ಮಾಡಲಾಗಿದ್ದು, ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಹಕರು ಪಾಂಡವೇಶ್ವರದ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆ ಮೆಟ್ಟಿಲೇರಿದ್ದಾರೆ.
ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್, ಪತ್ನಿ ಮರ್ಸಿಲಿನ್ ಗಿಲ್ಬರ್ಟ್ ಸೇರಿದಂತೆ 12 ಜನರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಮಲೈಕಾ ಸೊಸೈಟಿಯ ಮಂಗಳೂರು ಶಾಖೆಯ ಮ್ಯಾನೇಜರ್ ರೀನಾ ಜೋಶ್ ಳನ್ನು ಬಂಧಿಸಿದ್ದಾರೆ.