ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ರಾಜಕಾರಣಿಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಬ್ಲೂ ಫಿಲ್ಮ್ ನೋಡುವ ಅಡಿಕ್ಷನ್ ಇದ್ದವರು ರಾಜ್ಯದ ಡಿಸಿಎಂ ಆಗುತ್ತಾರೆ ಎಂದಾಗ ರಾಜ್ಯದ ಜನತೆಗೆ ನಗು, ದುಃಖ ಬಂದಿತ್ತು. ಅಸಲಿಗೆ ಡ್ರಗ್ಸ್ ಸೇವನೆ ಹಾಗೂ ಬ್ಲೂ ಫಿಲ್ಮ್ ಅಡಿಕ್ಷನ್ ಎರಡೂ ಕೂಡ ವ್ಯಸನವೇ ಎಂದು ಡಿಸಿಎಂ ಲಕ್ಷಣ ಸವದಿ ವಿರುದ್ಧ ಮಾಜಿ ಸಚಿವ ಸಾ.ರಾ. ಮಹೇಶ್ ತಿರುಗೇಟು ನೀಡಿದ್ದಾರೆ.
ಈ ಕುರಿಟು ಟ್ವಿಟರ್ ನಲ್ಲಿ ಗುಡುಗಿರುವ ಸಾ.ರಾ. ಮಹೇಶ್, ಡ್ರಗ್ಸ್ ದಂಧೆ ಹಣದಿಂದ ಮೈತ್ರಿ ಸರ್ಕಾರವನ್ನು ಬೀಳಿಸಿದ್ದರು ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪ ಡಿಸಿಎಂ ಲಕ್ಷಣ ಸವದಿಯವರಿಗೆ ನಗು ತರಿಸಿತ್ತಂತೆ. ಬ್ಲೂ ಫಿಲ್ಮ್ ನೋಡುವ ಅಡಿಕ್ಷನ್ ಇದ್ದವರು ರಾಜ್ಯದ ಡಿಸಿಎಂ ಆಗುತ್ತಾರೆ ಎಂದಾಗ ಇಡೀ ರಾಜ್ಯದ ಜನತೆಗೆ ನಗು, ದುಃಖ ಎರಡೂ ಬಂದಿತ್ತು ಎಂದು ಹೇಳಿದ್ದಾರೆ.
ಅಲ್ಲದೇ ಡ್ರಗ್ಸ್ ಮಾಫಿಯಾ ವಿರುದ್ಧ ಮೊದಲು ಧ್ವನಿ ಎತ್ತಿದ್ದೇ ಕುಮಾರಸ್ವಾಮಿಯವರು. ಕೃಷಿ ಸಚಿವ ಬಿ.ಸಿ. ಪಾಟೀಲ್ ಈಗ ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.