ಬೆಂಗಳೂರು: ಮಳೆಯಿಂದ ಹಾನಿಗೊಳಗಾದ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಕಷ್ಟದಲ್ಲಿರುವ ಕುಟುಂಬಕ್ಕೆ ತಲಾ 25 ಸಾವಿರ ರೂ ಪರಿಹಾರ ಘೋಷಿಸಿದರು.
ನಿನ್ನೆ ಸುರಿದ ಭಾರೀ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹಲವೆಡೆ ಅಕ್ಷರಶ: ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಊಟ, ನೀರಿಲ್ಲದೇ ಪರದಾಡುತ್ತಿದ್ದಾರೆ. ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ರಾಜಧಾನಿಯ ಮಳೆ ಅವಾಂತರ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದ ಸಿಎಂ ಯಡಿಯೂರಪ್ಪ, ಬಳಿಕ ಮಳೆಹಾನಿ ಪ್ರದೇಶಕ್ಕೆ ಖುದ್ದು ಭೇಟಿ ನೀಡಿದರು.
ಈ ವೇಳೆ ಹೊಸಕೆರೆ ಹಳ್ಳಿ, ದತ್ತಾತ್ರೆಯ ನಗರಕ್ಕೆ ಭೇಟಿ ನೀಡಿದ ಸಿಎಂ, ಮಳೆಹಾನಿ ಪ್ರದೇಶವನ್ನು ವೀಕ್ಷಿಸಿ, ಸಂತ್ರಸ್ತರ ಸಂಕಷ್ಟ ಆಲಿಸಿದರು. ಈ ವೇಳೆ ಸಂಕಷ್ಟದಲ್ಲಿರುವ ಪ್ರತಿ ಕುಟುಂಬಕ್ಕೆ ತಲಾ 25 ಸಾವಿರ ರೂ. ಪರಿಹಾರ ಘೋಷಿಸಿದರು.